News

ಬದುವಿನಲ್ಲಿ ಮರ ಬೆಳೆಸಿ, 40 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹ ಧನ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09 January, 2021 10:15 AM IST By:
Agro forestry

 ಹೊಲಗಳಲ್ಲಿ ಆಹಾರ, ವಾಣಿಜ್ಯ ಬೆಳೆ ಜತೆಯಲ್ಲಿಯೇ ಅರಣ್ಯ ಕೃಷಿ ಮಾಡಿದರೆ ಸರ್ಕಾರವೇ ರೈತರಿಗೆ ಪ್ರೋತ್ಸಾಹದ ರೂಪದಲ್ಲಿ ಹಣ ಕೊಡುತ್ತದೆ. ಹೌದು ಇಂತಹ ಅತ್ಯುತ್ತಮ ಯೋಜನೆಯನ್ನು ಅರಣ್ಯ ಇಲಾಖೆಯು ಜಾರಿಗೆ ತಂದಿದೆ.

ರೈತರು ಹೊಲ ಅಥವಾ ಹೊಲಗಳ ಬದುಗಳಲ್ಲಿ ಮರಗಳನ್ನು ಬೆಳೆಸುವ ಮೂಲಕ ಹೊಲದ ಗಡಿಯನ್ನು ಭದ್ರ ಪಡಿಸಿಕೊಳ್ಳುವ ಜತೆಗೆ ಬೋನಸ್ ರೂಪದ ಪ್ರೋತ್ಸಾಹ ಹಣ ಸಿಗುತ್ತದೆ.  ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (ಕೃಅಪ್ರೋಯೋ) ಯಡಿಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸಲಾಗುವುದು ಹಾಗೂ ಅವುಗಳನ್ನು ಜಮೀನಿನಲ್ಲಿ ನೆಟ್ಟು ಪೋಷಿಸಿದ್ದಲ್ಲಿ ಪ್ರತಿ ಬದುಕುಳಿದ ಸಸಿಗೆ ಲೆಕ್ಕ ಹಾಕಿ ಜತೆಗೆ ಅರಣ್ಯ ಇಲಾಖೆಯಿಂದ ೪೦ ಸಾವಿರ ರೂ. ವರೆಗೆ ಪ್ರೋತ್ಸಾಹಧನ ನೀಡಲಾಗುವುದು. ಒಬ್ಬ ರೈತ ಹೆಕ್ಟೇರ್ ಗೆ ಅಂದಾಜು 500 ಕ್ಕೂ ಹೆಚ್ಚು ಸಸಿ ಬೆಳೆಸಬಹುದು.

 ಕೃಅಪ್ರೋಯೋ ಅಡಿ ನೋಂದಣಿ ಮಾಡಿಕೊಳ್ಳಲು ಇರುವ ಪ್ರಕ್ರಿಯೆ ಏನು

ಕೃಅಪ್ರೋಯೋ ಅಡಿಯಲ್ಲಿ ಸಸಿಗಳನ್ನು ನೆಡುವ ಇಚ್ಛೆಯುಳ್ಳ ರೈತರು ಸಮೀಪದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ನಿರ್ದಿಷ್ಟಪಡಿಸಿದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕು: ಅರ್ಜಿದಾರರ ಹೆಸರು, ವಿಳಾಸ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಸಸಿ ನೆಡಲು ಉದ್ದೇಶಿಸಿರುವ ಭೂಮಿಯ ಪಹಣಿ, ಭೂಮಿಯ ಕೈ ನಕ್ಷೆ, ಅಗತ್ಯವಿರುವ ಸಸಿಗಳ ವಿವರ (ಪ್ರಭೇದ, ಸಸಿಗಳ ಸಂಖ್ಯೆ, ಪಾಲಿ ಬ್ಯಾಗ್‌ಗಳ ಗಾತ್ರ ಇತ್ಯಾದಿ) ಮತ್ತು ಅರ್ಜಿದಾರರ ಬ್ಯಾಂಕ್‌ ಖಾತೆಯ ವಿವರ. ಅರ್ಜಿಯ ಜೊತೆ ನೋಂದಣಿ ಶುಲ್ಕ ರೂ. 10/- ನೀಡಬೇಕು.

ಸರಕಾರದ ಪ್ರೋತ್ಸಾಹ ಧನ:

ಮೂರು ವರ್ಷ ನಿಮ್ಮ ಹೊಲದಲ್ಲಿ ಗಿಡ ಬೆಳೆಸಲು ನಿಮಗೆ ಸರ್ಕಾರ ಹಣ ನೀಡುತ್ತದೆ. ಒಂದು ಗಿಡಕ್ಕೆ ಮೊದಲ ವರ್ಷ ಉಳಿದ್ದರೆ 30 ರೂ. ಎರಡನೇ ವರ್ಷವೂ ಸಹ ಉಳಿದ ಗಿಡಗಳಿಗೆ ವರ್ಷಕ್ಕೆ ಗಿಡವೊಂದಕ್ಕೆ 30 ರೂ. ಮೂರನೇ ವರ್ಷಕ್ಕೆ 40 ರೂ ನೀಡುತ್ತಾರೆ. ಒಟ್ಟು ಒಂದು ಗಿಡಕ್ಕೆ ಮೂರು ವರ್ಷದಿಂದ 100 ರೂ ನೀಡಲಾಗುತ್ತದೆ. ರೈತ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ನೆಟ್ಟಾಗ ಗಣನೀಯ ಪ್ರಮಾಣದ ಪ್ರೋತ್ಸಾಹ ಧನ ಪಡೆಯಲು ಸಾಧ್ಯ. ಇದರ ಹೊರತಾಗಿ, ಬೆಳೆದ ಮರಗಳಿಂದ ಹಣ್ಣುಗಳು, ಬೀಜಗಳು, ಮೇವು, ಉರುವಲು, ಕಂಬ, ಮರ, ಮುಂತಾದ ವಿವಿಧ ರೂಪಗಳಲ್ಲಿ ಗಣನೀಯ ಆದಾಯವನ್ನೂ ರೈತರು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ಅರಣ್ಯ ಇಲಾಖೆಯನ್ನು ಸಂಪರ್ಕ ಮಾಡಿ.

ನೋಂದಣಿಯನ್ನು ಯಾವಾಗ ಮಾಡಬೇಕು?

ಮಳೆಗಾಲ ಆರಂಭವಾಗುವುದಕ್ಕಿಂತ ಮುಂಚೆ ನೋಂದಣಿಯನ್ನು ಮಾಡಬೇಕು (ಮೇ ತಿಂಗಳ ಅಂತ್ಯಕ್ಕಿಂತ ಮುಂಚೆ)

ಸಸಿಗಳನ್ನು ಪಡೆಯುವುದು ಹೇಗೆ?

ಅರ್ಜಿದಾರರು ಸಮೀಪದ ನರ್ಸರಿಗೆ ಭೇಟಿ ನೀಡಬೇಕು ಮತ್ತು ಈ ಕೆಳಗಿನ ಸಬ್ಸಿಡಿ ದರಗಳನ್ನು ಪಾವತಿಸಿ ಅರ್ಜಿ ಸಲ್ಲಿಸಿದ ಸಸಿಗಳನ್ನು ಪಡೆದುಕೊಳ್ಳಬೇಕು. • 5”x8” ಮತ್ತು 6”x9” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 1/- • 8”x12” ಗಾತ್ರದ ಪಾಲಿ ಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 3/- • 10”x16” ಮತ್ತು 14”20” ಪಾಲಿಬ್ಯಾಗ್‌ಗಳಲ್ಲಿರುವ ಪ್ರತಿ ಸಸಿಗೆ ರೂ. 5/ ರೂಪಾಯಿ.

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು

ಒಂದು ವೇಳೆ ಅರ್ಜಿ ಸಲ್ಲಿಸಿದ ಸಸಿಗಳು ಸಮೀಪದ ನರ್ಸರಿಯಲ್ಲಿ ಲಭ್ಯವಿಲ್ಲದಿದ್ದರೆ, ನರ್ಸರಿಯ ಸಂಬಂಧಿತ ಉಸ್ತುವಾರಿ ಸಿಬ್ಬಂದಿಯಿಂದ ಅದನ್ನು ಸೂಚಿಸುವ ಲಿಖಿತ ಅನುಮೋದನೆಯನ್ನು ಪಡೆದುಕೊಳ್ಳಬೇಕು. ಲಿಖಿತ ಅನುಮೋದನೆಯಲ್ಲಿ ಸಲ್ಲಿಸುವ ಮೂಲಕ, ಸಸಿಗಳು ಲಭ್ಯವಿರುವ ವಲಯ ಅಥವಾ ವಿಭಾಗದ ಇನ್ನೊಂದು ನರ್ಸರಿಯಿಂದ ಸಸಿಗಳನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಅರ್ಜಿದಾರ ಸಸಿಗಳನ್ನು ಪಡೆದುಕೊಳ್ಳಲು ವಿಫಲನಾದರೆ, ಅರಣ್ಯ ಇಲಾಖೆ ಆ ವರ್ಷ ಸಸಿಗಳನ್ನು ಬೆಳೆಸುತ್ತದೆ ಮತ್ತು ಮುಂದಿನ ಮಳೆಗಾಲಕ್ಕೆ ಸಸಿಗಳನ್ನು ಒದಗಿಸಲು ವ್ಯವಸ್ಥೆ ಮಾಡುತ್ತದೆ.