ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ವತಿಯಿಂದ ಬೆಂಗಳೂರಿನ ದೊಡ್ಡಗುಬ್ಬಿ ರಸ್ತೆಯಲ್ಲಿರುವ ಕ್ಯಾಲಸನಹಳ್ಳಿಯಲ್ಲಿ ಈ ಕೇಂದ್ರವಿದೆ. ಸಸ್ಯಮೇಳ ಇದೇ ಫೆಬ್ರವರಿ 19ರಿಂದ 27ರವರೆಗೆ ಹಮ್ಮಿಕೊಳ್ಳಲಾಗಿದೆ.
ಹೌದು, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯ ಎನ್.ಎಸ್. ಹೇಮಾ ತೋಟಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ 9 ದಿನಗಳವರೆಗೆ ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಈ ಮೇಳ ನಡೆಯಲಿದೆ. ಇಂಡೊ ಅಮೆರಿಕನ್ ಹೈಬ್ರೀಡ್ ಸೀಡ್ಸ್ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಆಟ್ನಾವರ್ ಮೇಳವನ್ನು ಉದ್ಘಾಟಿಸಲಿದ್ದಾರೆ.
ವಿಶೇಷ ಸಸ್ಯಗಳು, ಆಲಂಕಾರಿಕ ಗಿಡಗಳು, ಗಿಡಮೂಲಿಕೆ, ಸುಗಂಧ ಸಸ್ಯಗಳು ಮತ್ತು ಔಷಧಿ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಎಪಿಡಿಯಲ್ಲಿ ತೋಟಗಾರಿಕಾ ತರಬೇತಿ ಪಡೆಯುತ್ತಿರುವ ಅಂಗವಿಕಲ ಸದಸ್ಯರು ಮತ್ತು ವೃತ್ತಿಪರರು ಗಿಡಗಳನ್ನು ಕಲಾತ್ಮಕವಾಗಿ ಜೋಡಿಸಿ ಪ್ರದರ್ಶಿಸಲಿದ್ದಾರೆ. ವಿಶೇಷ ಮಕ್ಕಳ ಕುರಿತು ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ.
ಇದೇ ಭಾನುವಾರ (ಫೆ.21) ‘ಊಟ ಫ್ರಂ ಯುವರ್ ತೋಟ’ ಎಂಬ ಕಾರ್ಯಾಗಾರವನ್ನೂ ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ತರಬೇತಿ ಪಡೆಯುತ್ತಿರುವ ಯುವಸಮೂಹಕ್ಕೆ ವಿವಿಧ ಸಸ್ಯಗಳ ಜೋಡಣೆ ಹಾಗೂ ಪ್ರದರ್ಶನದ ಮೂಲಕ ಅವರ ಕಲಿಕೆ, ಕೌಶಲ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಮೇಳವು ಉತ್ತಮ ವೇದಿಕೆಯಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮಾಹಿತಿಗೆ ಮೊಬೈಲ್ ಸಂಖ್ಯೆ 98445–32307ಗೆ ಕರೆ ಮಾಡಿ ಸಂಪರ್ಕಿಸಬಹುದು.