News

ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ- ಒಂದೇ ವಾರದಲ್ಲಿ ನಾಲ್ಕು ಬಾರಿ ಏರಿಕೆ

24 January, 2021 9:04 AM IST By:
Petrol price increase

ಪೆಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೇಲೆ ಏರಿಕೆಯು ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಈ ವಾರದಲ್ಲಿ ಸತತ 4ನೇ ಬಾರಿ ತೈಲಬೆಲೆ ಏರುವುದರೊಂದಿಗೆ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ತಲುಪಿದೆ.

ಶನಿವಾರ ಕೂಡ ಸರ್ಕಾರಿ ತೈಲ ಸಂಸ್ಥೆಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಭಾರೀ ಏರಿಕೆ ಮಾಡಿವೆ. ಈ ಮೂಲಕ ತೈಲ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಟಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಮೇಲೆ 25 ಪೈಸೆ ಹೆಚ್ಚಿಸಿವೆ. ಇದರಿಂದಾಗಿ ಮಾರಾಟ ದರ ಒಂದು ಲೀಟರ್‌ ಪೆಟ್ರೋಲ್‌ಗೆ  85.70 ಮತ್ತು ಡೀಸೆಲ್‌  75.88ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ದರ  92.28 ಮತ್ತು ಡೀಸೆಲ್‌ ದರ  82.66ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ ದರ 26 ಪೈಸೆ ಹೆಚ್ಚಾಗಿ  88.59ಕ್ಕೆ ಹಾಗೂ ಡೀಸೆಲ್‌ ದರ 27 ಪೈಸೆ ಹೆಚ್ಚಾಗಿ  80.47ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಕ್ರಮವಾಗಿ ಲೀಟರ್‌ಗೆ 93.59 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 83.85 ರೂ. ತಲುಪಿದೆ.

  ಆಯಾ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಹೆರಲ್ಪಡುವ ತೆರಿಗೆಯಲ್ಲಿ ವ್ಯತ್ಯಾಸವಿರುವುದರಿಂದ, ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ತುಸು ವ್ಯತ್ಯಾಸವಿರುತ್ತದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಇಂಧನದ ಬೆಲೆ ಏರಿಕೆ ಮುಂದುವರೆದರೆ 1 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೆಂಚುರಿ ಬಾರಿಸುವ ದಿನವೂ ದೂರವೇನಿಲ್ಲ ಎಂದು ಹೇಳಲಾಗುತ್ತಿದೆ.