News

ಮತ್ತೆ ಏರಿಕೆಯಾಯಿತು ಪೆಟ್ರೋಲ್ ಡೀಸೆಲ್ ಬೆಲೆ

14 February, 2021 9:50 AM IST By:
petrol price hike

ರಾಜ್ಯದಲ್ಲಿ ಪೆಟ್ರೋಲ್‌ ದರ ಕಳೆದ ಐದು ದಿನಗಳಿಂದ ಏರಿಕೆಯಾಗುತ್ತಿದ್ದು 91 ರೂಪಾಯಿಗಳ ಗಡಿ ದಾಟಿದೆ. ಹೌದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಶನಿವಾರವೂ ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಏರಿಕೆ ಮಾಡಿವೆ.

ಮೊದಲೇ ಬೆಲೆ ಏರಿಕೆಯಿಂದಾಗಿ ಸಂಕಷ್ಟದಲ್ಲಿರುವ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ  ಗಾಯದ ಮೇಲೆ ಬರೆ ಎಳೆದ0ತಾಗಿದೆ. ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್‌ ದರ ಪ್ರತಿ ಲೀಟರಿಗೆ 31 ಪೈಸೆ ಹೆಚ್ಚಿಸಲಾಗಿದ್ದು,  91.40ಕ್ಕೆ ತಲುಪಿದೆ. ಡೀಸೆಲ್‌ ದರ ಪ್ರತಿ ಲೀಟರಿಗೆ 38 ಪೈಸೆ ಏರಿಕೆ ಮಾಡಿದ್ದು  83.47ರಂತೆ ಮಾರಾಟವಾಗಿದೆ. ಆರು ದಿನಗಳಲ್ಲಿ ಪೆಟ್ರೋಲ್‌ ದರ ಒಂದು ಲೀಟರಿಗೆ 1.24 ಹಾಗೂ ಡೀಸೆಲ್‌ ದರ ಒಂದು ಲೀಟರಿಗೆ  1.71 ರಷ್ಟು ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಬ್ರೆಂಟ್‌ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 61 ಡಾಲರ್‌ಗೆ ಏರಿಕೆ ಹಾಗೂ  ಪೆಟ್ರೋಲ್‌ ಮೂಲ ದರಕ್ಕಿಂತ ತೆರಿಗೆ ಹೊರೆಯೇ ಹೆಚ್ಚಾಗುತ್ತಿರುವುದರಿಂದ ತೈಲ ಬೆಲೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಮುಂಬೈನಲ್ಲಿ ಪೆಟ್ರೋಲ್‌ ದರ 30 ಪೈಸೆ ಹೆಚ್ಚಾಗಿ ದಾಖಲೆಯ ಮಟ್ಟವಾದ  94.93ಕ್ಕೆ ಏರಿಕೆಯಾಗಿದೆ. ಡೀಸೆಲ್‌ ದರ 36 ಪೈಸೆ ಹೆಚ್ಚಾಗಿ  85.70ಕ್ಕೆ ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ  88.41 ಮತ್ತು ಡೀಸೆಲ್‌ ದರ  78.74ಕ್ಕೆ ತಲುಪಿದೆ. ಕೋಲ್ಕೊತ್ತಾದಲ್ಲಿ ಪೆಟ್ರೋಲ್ ಬೆಲೆ 89.73 ರೂಪಾಯಿ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 90.70 ರೂಪಾಯಿಗೆ ತಲುಪಿದೆ

ದರ ಇಳಿಕೆಗೆ ದಾರಿ ಏನು?

 ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಬಕಾರಿ ಸುಂಕ, ವ್ಯಾಟ್‌ ತಗ್ಗಿಸಬೇಕು. ತೆರಿಗೆ ಇಳಿಸಿದರೆ ಜನತೆಗೆ ಅನುಕೂಲ, ಹಣದುಬ್ಬರ ಇಳಿಕೆಗೂ ಸಹಾಯವಾಗಲಿದೆ. ಕೋವಿಡ್‌-19 ಬಿಕ್ಕಟ್ಟಿನಿಂದ ಕಂಗಾಲಾಗಿರುವ ಹೋಟೆಲ್‌ ಉದ್ಯಮಕ್ಕೆ ಡೀಸೆಲ್‌ ದರ ಹೆಚ್ಚಳದಿಂದ ತೀವ್ರ ಸಮಸ್ಯೆ ಉಂಟಾಗಿದೆ. ನಿತ್ಯ ತರಕಾರಿ, ಹಣ್ಣುಗಳ ಸಾಗಣೆ ವೆಚ್ಚದ ಹೊರೆ ಬಿದ್ದಿದೆ. ದೈನಂದಿನ ವಸ್ತುಗಳ ಬೆಲೆ ಹೆಚ್ಚಳ ಜನತೆಗೂ ಹೊರೆಯಾಗುತ್ತಿದೆ.