News

ಭಾರತದ ಈ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 5 ರೂ ಇಳಿಕೆ

17 February, 2021 7:08 AM IST By:

ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಸತತ ಏರಿಕೆ ಕಂಡುಬಂದಿರುವ ಬೆನ್ನಲ್ಲೆ ಮೇಘಾಲಯ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 5 ರೂಪಾಯಿ ಇಳಿಸಲಾಗಿದೆ.

ಹೌದು, ಮೇಘಾಲಯ ಸರ್ಕಾರವು ಈ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಮೇಘಾಲಯದಲ್ಲಿ ಮೌಲ್ಯವರ್ಧಿತ ತೆರಿಗೆ(VAT) ಕಡಿಮೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ.ಸಂಗ್ಮಾ ಮಂಗಳವಾರ ತಿಳಿಸಿದ್ದಾರೆ.

ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ 91.26 ರೂಪಾಯಿಂದ 85.86 ರೂಪಾಯಿಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆಯು 86.23 ರೂಪಾಯಿಯಿಂದ 79.13 ರೂಪಾಯಿಗೆ ಇಳಿಕೆಯಾಗಿದೆ. ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ವಾಣಿಜ್ಯ ಸರಕು ಸಾಗಣೆದಾರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿರುವ ನಡುವೆ ರಾಜ್ಯ ಸರ್ಕಾರವು ಈ ತೀರ್ಮಾನವನ್ನು ಘೋಷಿಸಿದೆ.

ಕಳೆದ ವಾರವಷ್ಟೇ ಮೇಘಾಲಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗೆ 2 ರೂಪಾಯಿ ಇಳಿಕೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿ ಇಳಿಕೆ ಮಾಡಿದ್ದರಿಂದ ಪೆಟ್ರೋಲ್ ಪೆಟ್ರೋಲ್ ಮೇಲೆ 7.4 ರೂಪಾಯಿ ಮತ್ತು ಡೀಸೆಲ್ ಮೇಲೆ 7.1 ರೂಪಾಯಿ ರಿಯಾಯಿತಿ ನೀಡಿದಂತೆ ಆಗಿದೆ.

ಸರ್ಕಾರವು ಸೂಕ್ತ ರೀತಿ ಕ್ರಮ ತೆಗೆದುಕೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಕೆ. ಸಂಗ್ಮಾ ಅವರು ಇಂಧನದ ಮೇಲೆ ವಿಧಿಸುತ್ತಿದ್ದ ಶೇ.12ರಷ್ಟು ವ್ಯಾಟ್ ನ್ನು ಕಡಿತಗೊಳಿಸುವುದಕ್ಕೆ ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ವರ್ಷ ಮೇಘಾಲಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 326 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗಿದೆ.