News

ಕೀಟನಾಶಕಗಳ ಸಿಂಪರಣೆ ಮಾಡುವಾಗ ಈ ಕೆಳಗಿನ ಮುನ್ನೆಚ್ಚರಿಕೆವಹಿಸಿ

21 October, 2020 7:13 AM IST By:

 ಬೆಳೆಗಳಿಗೆ ರಾಸಾಯನಿಕ ಕೀಟನಾಶಕಗಳ ಬಳಕೆಗೆ ಮೊದಲು ಮಾಹಿತಿ ಪಡೆದುಕೊಳ್ಳುವುದು ಅವಶ್ಯ. ಮಿತವಾಗಿ ಬಳಸುವುದರಿಂದ ಅವುಗಳ ದುರ್ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಕೀಟನಾಶಕ ಸಿಂಪರಣೆ ಮಾಡುವುದಕ್ಕಿಂತ ಮುಂಚೆ ಏನೇನು ಕ್ರಮಕೈಗೊಳ್ಳಬೇಕೆಂಬುದರ ಮಾಹಿತಿ ಇಲ್ಲಿದೆ.

  • ನಾವು ಕೀಟ ನಾಶಕಗಳನ್ನು ಅಥವಾ ಪೀಡೆನಾಶಕಗಳನ್ನು ಬಳಸುವಾಗ ಪೀಡೆಗಳ ಸಂಖ್ಯೆ ಆರ್ಥಿಕ ಹಾನಿಯ ಮಟ್ಟಕ್ಕಿಂತ ಹೆಚ್ಚಿದೆಯೇ? ಎಂದು ಗಮನಿಸಬೇಕು, ಆರ್ಥಿಕ ಮಟ್ಟಕಿಂತ ಹೆಚ್ಚಿದ್ದಾಗ ಮಾತ್ರ ರಾಸಾಯನಿಕಗಳನ್ನು ಉಪಯೋಗಿಸಬೇಕು. ಇದರಿಂದ ಅನಾವಶ್ಯಕ ಖರ್ಚು ಮತ್ತು ಅನಾವಶ್ಯಕ ಬಳಕೆಯನ್ನು ತಡೆಯಬಹುದು.
  • ಶಿಫಾರಸ್ಸು ಮಾಡಿದಂತಹ ಪೀಡೆನಾಶಕಗಳನ್ನು ನಿಗದಿಪಡಿಸಿರುವ ಪ್ರಮಾಣದಲ್ಲಿ, ನಿಗದಿತ ಬೆಳೆಗಳಿಗೆ ಮಾತ್ರ ಉಪಯೋಗಿಸಬೇಕು.
  • ಇತರೆ ಹತೋಟಿ ಕ್ರಮಗಳನ್ನು ಬಳಸಿ ಕೀಟ ಹತೋಟಿ ಮಾಡಬೇಕು, ಸಾಧ್ಯವಾಗದ ಸಂದರ್ಭದಲ್ಲಿ ಪೀಡೆನಾಶಕಗಳ ಬಳಕೆ ಅಂತಿಮ ಆಯ್ಕೆಯಾಗಬೇಕು.
  • ಅವೈಜ್ಞಾನಿಕವಾಗಿ ಸಿಂಪರಣೆ ಹಾಗೂ ವೈಜ್ಞಾನಿಕವಾಗಿ ಎರಡರಿಂದ ಮೂರು ಕೀಟನಾಶಕಗಳನ್ನು ಬೆರೆಸಿ ಸಿಂಪಡಿಸುವುದರಿಂದ ಹೆಚ್ಚಿನ  ಹತೋಟಿ ಸಾಧ್ಯವಿಲ್ಲ ಹಾಗೂ ಇದರಿಂದ ಖರ್ಚುಹೆಚ್ಚಾಗುತ್ತದೆ.
  • ಒಂದೇ ರೀತಿಯ ಕೀಟನಾಶಕವನ್ನು ಪದೇಪದೇ  ಅದೇ ಬೆಳೆಗೆ ಉಪಯೋಗಿಸಬಾರದು.
  • ಎರಡು ಸಿಂಪರಣೆಗಳ ಮಧ್ಯೆಎಂಟರಿಂದ ಹದಿನೈದು ದಿನಗಳ ಅಂತರವಿರಬೇಕು.
  • ಕೀಟನಾಶಕಗಳ ಸುರಕ್ಷಿತ ಬಳಕೆ
  • ಕೀಟನಾಶಕಗಳನ್ನು ಬೆಳಗ್ಗೆ ಅಥವಾ ಸಂಜೆ ಸಿಂಪರಣೆ ಮಾಡಬೇಕು.
  • ಪೀಡೆನಾಶಕಗಳನ್ನು ಯಾವುದೇ ತಿನ್ನುವ ಆಹಾರಪದಾರ್ಥಗಳ ಜೊತೆ ಶೇಖರಣೆಮಾಡಬಾರದು.
  • ಕೀಟನಾಶಕ ಬಳಸಿದ ನಂತರ ಉಳಿದ ಕೀಟನಾಶಕವನ್ನು ಅದೇ  ಡಬ್ಬಿಯಲ್ಲಿ ಶೇಖರಿಸಿಡಬೇಕು.
  • ಮಕ್ಕಳ ಕೈಗೆ ಸಿಗುವ ಹಾಗೆ ಕೀಟನಾಶಕಗಳನ್ನು ಶೇಖರಿಸುವುದು ಅಪಾಯ.
  • ಚಿಕ್ಕಮಕ್ಕಳು ಮೈಮೇಲೆ ಗಾಯವಿರುವವರು ಅಥವಾ ಅನಾರೋಗ್ಯದಿಂದ ಬಳಲುತ್ತಿರುವವರು ಸಿಂಪರಣೆ ಮಾಡಬಾರದು.
  • ಸಿಂಪರಣೆ ಮಾಡುವಾಗ ಮೈ-ಕೈ ಮುಚ್ಚುವ ಹಾಗೆ ಕೋಟು,ಕನ್ನಡಕ, ಕೈಚೀಲ ಹಾಗೂ ಬೂಟುಗಳನ್ನು ಧರಿಸಿದರೆ ಉತ್ತಮ.
  • ನಾಜಲ್ಗಳನ್ನು ಬಾಯಿಯಿಂದ ಊದಿ ಸರಿಪಡಿಸಲು ಯತ್ನಿಸಬಾರದು.
  • ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಸಿಂಪಡಣೆ ಮಾಡಬಾರದು ಹಾಗೂ ಸಿಂಪಡಣೆ ಮಾಡುವಾಗ ಗಾಳಿಯ ವೇಗ ಕಡಿಮೆಇರಬೇಕು.
  • ಸಿಂಪಡಿಸುವಾಗ ಆಹಾರ, ಹಣ್ಣು-ಹಂಪಲು, ಧೂಮಪಾನ, ಮದ್ಯಪಾನ ಮಾಡಬಾರದು.
  • ಸಿಂಪರಣಾ ಉಪಕರಣಗಳನ್ನು ಸ್ವಚ್ಛನೀರಿ ನಿಂದತೊಳೆದು ಒಣಗಿಸಿ ಇಡಬೇಕು.
  • ಬಾವಿಯಲ್ಲಿ, ಕೆರೆಯಲ್ಲಿ, ದನಕರು ನೀರು ಕುಡಿಯುವ ತೊಟ್ಟಿಯಲ್ಲಿ, ನಾಲೆಗಳಲ್ಲಿ ಸಿಂಪರಣಾ ಉಪಕರಣಗಳನ್ನು ತೊಳೆಯಬಾರದು.
  • ಸಿಂಪಡಣೆ ಮಾಡಿದ ನಂತರ ಉಳಿದ ನೀರು ಮಿಶ್ರಿತ ರಾಸಾಯನಿಕವನ್ನು ಶೇಖರಿಸಿಡಬಾರದು.
  • ಸಿಂಪರಣೆ ಮಾಡಿದ ಪ್ರದೇಶದಲ್ಲಿ ಹಸು, ಕರು, ಕುರಿ, ಮೇಕೆ ಮುಂತಾದ ರಾಸುಗಳನ್ನು  ಮೇಯಲು ಬಿಡಬಾರದು.
  • ಹೊಲದ ಒಂದು ಮೂಲೆಯಲ್ಲಿ ಆಳವಾದ ಗುಂಡಿತೋಡಿ ಅಲ್ಲಿಗೆ ಖಾಲಿಯಾದ ಕೀಟನಾಶಕಗಳ ಡಬ್ಬಿಯನ್ನು ಹಾಕಿ ಮಣ್ಣಿನಲ್ಲಿ ಮುಚ್ಚಬೇಕು.
  • ತೆಂಗಿನಲ್ಲಿ ಕೀಟನಾಶಕಗಳ  ಬೇರುಣಿಸುವ ಮುನ್ನ ಎಳನೀರು ಅಥವಾ ಕಾಯಿಗಳನ್ನು ಕೀಳಬೇಕು. ಬೇರುಣಿಸಿದ ನಂತರ 30ರಿಂದ 35 ದಿನಗಳವರೆಗೆ ಗಿಡದಿಂದ ತೆಂಗಿನಕಾಯಿ ಅಥವಾ ಎಳನೀರು ಕೀಳಬಾರದು.
  • ಸಿಂಪಡಿಸಿದನಂತರ ಸ್ನಾನಮಾಡಬೇಕು, ನಂತರ ಶುಭ್ರ ಬಟ್ಟೆ ಧರಿಸಬೇಕು.
  • ಸಿಂಪರಣೆ ಮಾಡಿದ ನಂತರ ಸುರಕ್ಷಿತ ಅವಧಿ ಮುಗಿಯುವವರೆಗೂ ಬೆಳೆ ಕಟಾವು ಮಾಡಬಾರದು,ಹಣ್ಣು-ಕಾಯಿ ಕೀಳಬಾರದು.
  • ಕಣ್ಣಿಗೆ, ಮೈಮೇಲೆ, ಚರ್ಮದ ಮೇಲೆ ಕೀಟನಾಶಕ ಬಿದ್ದರೆ,ಹೆಚ್ಚು ನೀರು ಬಳಸಿ ಸ್ವಚ್ಛ ಗೊಳಿಸಬೇಕು.
  • ಕೀಟನಾಶಕ ಸೇವಿಸಿದಲ್ಲಿ ಹಾಲು ಅಥವಾ ನೀರು ಮತ್ತು ಹಿಟ್ಟನ್ನು ಮಿಶ್ರಣಮಾಡಿ ಕುಡಿಸಿವಾಂತಿ ಮಾಡಿಸಬೇಕು,ಆಗ ಹೊಟ್ಟೆಯಲ್ಲಿನ ವಿಷ ಪದಾರ್ಥದ ಪರಿಣಾಮ ಕಡಿಮೆಯಾಗುತ್ತದೆ. ತದನಂತರ ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಕೀಟನಾಶಕದ ಬಾಟಲಿ ಅಥವಾ ಡಬ್ಬವನ್ನು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆನೀಡಬೇಕು.

 ಲೇಖಕರು: 1. ರಾಖೇಶ್.ಎಸ್, ಪ್ರಥಮ ವರ್ಷದ ಎಂ.ಎಸ್ಸಿ (ಕೃಷಿ), ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.

2. ಡಾ.ಎಸ್.ಜಿ.ಹಂಚಿನಾಳ್, ಸಹಾಯಕ ಪ್ರಾಧ್ಯಾಪಕರು, ಮುಖ್ಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.