ಕೊರೋನಾ ವೈರಸ್ ಸೋಂಕಿನ (ಕೋವಿಡ್ -19) ವಿರುದ್ಧ ಇಡೀ ದೇಶವೇ ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅವರು ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಯಾದ ನಂತರ ಎರಡನೇ ಬಾರಿಗೆ ತಮ್ಮ 64ನೇ ಕಂತಿನ ಮನದ ಮಾತು ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮತನಾಡಿದರು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸೋಂಕು ಹರಡದಂತೆ ಎಚ್ಚರಿಕೆವಹಿಸಬೇಕು. ನಾವು ಆರೋಗ್ಯವಂತರಾಗಿ ಬದುಕಬೇಕು. ಇತರರನ್ನೂ ಬದುಕಲು ಬಿಡಬೇಕು. ಅದಕ್ಕಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಎಲ್ಲೆಂದರಲ್ಲಿ ಉಗಳಬಾರದು ಎಂದು ಹೇಳಿದರು.
ಜಗತ್ತಿನಾದ್ಯಂತ ಕೊರೋನಾ ಸೋಂಕಿನ ವಿರುದ್ಧ ಹೋರಾಟ ನಡೆಯುತ್ತಿದ್ದರೂ ಇಲ್ಲಿಯವರೆಗೆ ಕೊರೋನಾ ನಿಯಂತ್ರಣ ತರಲು ಸಾಧ್ಯವಾಗುತ್ತಿಲ್ಲ. ಮುಂದುವರೆದ ದೇಶಗಳಾದ ಅಮೇರಿಕಾ, ಇಟಲಿ ಜರ್ಮನ್‍ನಂತಹ ದೇಶಗಳಲ್ಲಿಯೂ ಸಹ ಕೊರೋನಾ ತಡೆಯಲು ಹರಸಾಹರ ಪಡೆಯಲಾಗುತ್ತಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಭಾರತದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಕೊರೋನಾ ನಿಯಂತ್ರಣಕ್ಕೆ ತರಲು ಲಾಕ್‍ಡೌನ್‍ನಂತಹ ಕ್ರಮ ಕೈಗೊಂಡಿದ್ದಕ್ಕೆ ಇತರ ದೇಶಗಳು ಶ್ಲಾಘಿಸಿವೆ.
ದೇಶಾದ್ಯಂತ ಮಾರಕ ಕೊರೊನಾ ಸೋಂಕಿನ ವಿರುದ್ಧ ಇಡೀ ದೇಶದ ಜನರು ಒಗ್ಗಟ್ಟಿನಿಂದ ಸಮರ ಸಾರಿದ್ದಾರೆ. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮತ್ತು ದೌರ್ಜನ್ಯ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ಕೊರೊನಾ ವಿರುದ್ಧದ ಸಮರದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸೈನಿಕನಾಗಿದ್ದಾನೆ. ಕಾನೂನು, ನೀತಿ ರೂಪಿಸುವ ಹಾಗೂ ವೈದ್ಯಕೀಯ ಸೌಲಭ್ಯವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಇಡೀ ದೇಶವೇ ಒಂದು ತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಬಿಕ್ಕಟ್ಟಿನ ಮಧ್ಯೆ ಸಹಬಾಳ್ವೆ ಮೆರೆದ ದೇಶವಾಸಿಗಳಿಗೆ ಎಷ್ಟು ಪ್ರಶಂಸೆ ಸಲ್ಲಿಸಿದರೂ ಸಾಲದು ಎಂದು ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಪೆÇಲೀಸರೂ ಕೂಡ ವೈದ್ಯರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡಿ ಪ್ರಾಣ ಉಳಿಸುತ್ತಿರುವ ವೈದ್ಯರ ಮೇಲೆ ಹಲ್ಲೆ ನಡೆಸಿದಂತಹ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಈ ವಿಚಾರದಲ್ಲಿ ಪೆÇಲೀಸರ ಮಾತನ್ನು ಕೇಳಿ ಅವರಿಗೆ ಗೌರವ ನೀಡಿ. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಟೊಂಕಕಟ್ಟಿ ತಮ್ಮ ನೆರವಿನ ಹಸ್ತವನ್ನು ಚಾಚುತ್ತಿದ್ದಾರೆ. ಯಾರೂ ಕೂಡ ಹಸಿವಿನಿಂದ ಬಳಲಬಾರದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ರೈತರು ಕೂಡ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಕೆಲವು ಅನ್ನದಾತರು ತಮ್ಮ ಬೆಳೆಯನ್ನು ಬೆಳೆದು ಬಡವರಿಗಾಗಿ ಮಾರಾಟ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.
ಪವಿತ್ರ ರಂಜಾನ್ ಹಬ್ಬದ ಉಪವಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೂ ಶುಭಾಷಯ ಕೋರಿದ ಪ್ರಧಾನಿ ಸಂಯಮ, ಸಂವೇದನೆ, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ಕೊಟ್ಟರು.