News

ಅರ್ಹರ ಮನೆ ಬಾಗಿಲಿಗೇ ಬರಲಿದೆ ಪಿಂಚಣಿ

28 January, 2021 9:51 AM IST By: KJ Staff

ಮಾಸಾಶನ ಪಡೆಯುವವರಿಗೆ ಗುಡ್ ನ್ಯೂಸ್. ಆರ್ಥಿಕವಾಗಿ ಅಶಕ್ತರಾದ ಹಿರಿಯ ನಾಗರಿಕರು ಈಗ ಮಾಸಾಶನಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಹೌದು, ಅರ್ಹ ಫಲಾನುಭವಿಗಳ ಅಲೆದಾಟ ತಪ್ಪಿಸುವದಕ್ಕಾಗಿಯೇ ರಾಜ್ಯ ಸರ್ಕಾರ ದೇಶದಲ್ಲಿ ಮೊದಲ ಬಾರಿಗೆ ‘ಮನೆ ಬಾಗಿಲಿಗೇ ಮಾಸಾಶನ’ ಅಭಿಯಾನದ ಮೂಲಕ ಪಿಂಚಣಿ ಸೌಲಭ್ಯವನ್ನು ತಲುಪಿಸಲು ಮಹತ್ವದ ಹೆಜ್ಜೆ ಇಟ್ಟಿದೆ.

ಇಷ್ಟು ದಿನ ಪಿಂಚಣಿಗಾಗಿ ಫಲಾನುಭವಿಗಳು ಕಷ್ಟಪಡುತ್ತಿದ್ದರು. ಫಲಾನುಭವಿಗಳು ಸರ್ಕಾರಿ ಕಚೇರಿಗೆ ಹೋಗಿ, ಅಧಿಕಾರಿಗಳ ಬಳಿ ಕೈ ಕಟ್ಟಿ ನಿಲ್ಲಬೇಕಿತ್ತು, ಅದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ಇನ್ನು ಮುಂದೆ ಮಧ್ಯವರ್ತಿಗಳು ಇಲ್ಲದೇ, ಅರ್ಹ ಫಲಾನುಭವಿಗಳಿಗೆ ಪಿಂಚಣಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಸೌಲಭ್ಯ ಪಡೆಯುತ್ತಿರುವವರ ಮಾಹಿತಿ ಮರುಪರಿಶೀಲನೆ, ಪರಿಷ್ಕರಣೆ ಜತೆಗೆ ಹೊಸ ಅರ್ಹ ಫಲಾನುಭವಿಗಳನ್ನು ಗುರುತಸಿ ಅವರ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆ ಮಾಡುವಲ್ಲಿ ನವೋದಯ ಮೊಬೈಲ್ ಆ್ಯಪ್ ತಂತ್ರಾಂಶ ಸಹಕಾರಿಯಾಗಿದೆ.

ಸ್ವಯಂ ಪ್ರೇರಿತ ಪಿಂಚಣಿ ಅಭಿಯಾನ ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಿದೆ. ಪ್ರತಿ 3 ತಿಂಗಳಿಗೊಮ್ಮೆ 60 ವರ್ಷ ದಾಟಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡಲಾಗುವುದು.

ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಮನೆ ಬಾಗಿಲಲ್ಲೇ ಪಿಂಚಣಿ ಮಂಜೂರಾತಿ ಮಾಡುವ ‘ನವೋದಯ’ ಆ್ಯಪ್ ಮತ್ತು ತಂತ್ರಾಂಶಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ನವೋದಯ’ ಆ್ಯಪ್ ಮತ್ತು ತಂತ್ರಾಂಶಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು,  ‘ಮೊದಲ ಹಂತದಲ್ಲಿ ಹಿರಿಯ ನಾಗರಿಕರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ಎರಡನೇ ಹಂತದಲ್ಲಿ ವಿಧವೆಯರು, ಅಂಗವಿಕಲರು ಸೇರಿದಂತೆ ಉಳಿದ ಎಲ್ಲ ಪಿಂಚಣಿದಾರರಿಗೆ ಯೋಜನೆ ಜಾರಿ ಮಾಡಲು ಕ್ರಮ ವಹಿಸಲಾಗುವುದು’ ಎಂದರು.

ಫಲಾನುಭವಿಗಳನ್ನು ಕಂದಾಯ ಇಲಾಖೆಯೇ ಗುರುತಿಸಿ ಪಿಂಚಣಿ ನೀಡಲಿದೆ. ಹೆಚ್ಚು ಮಂದಿಗೆ ನೆರವಾಗಲು ವಾರ್ಷಿಕ ಆದಾಯ ಮಿತಿಯನ್ನು 12 ಸಾವಿರ ರೂಪಾಯಿಯಿಂದ 35 ಸಾವಿರ ರೂಪಾಯಿಯವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಮಾಸಿಕ 3000 ರೂಪಾಯಿ ಒಳಗಿನ ಆದಾಯವುಳ್ಳ ಅರ್ಹರು ಮಾಸಾಶನ ಪಡೆಯಲು ನೆರವಾಗಲಿದೆ. ಎಂದರು.

 ‘ಕಂದಾಯ ಸಚಿವ ಆರ್. ಅಶೋಕ ಮಾತನಾಡಿ, ‘ಉಡುಪಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಅದು ಯಶಸ್ವಿಯಾದ ಬಳಿಕ ರಾಜ್ಯದಾದ್ಯಂತ ಜಾರಿ ಮಾಡುತ್ತಿದ್ದೇವೆ. ಆಧಾರ್‌ ಲಿಂಕ್ ಮಾಡುವುದರಿಂದ ಸರಳವಾಗಿ ಪಿಂಚಣಿ ವಿತರಣೆ ಸಾಧ್ಯವಾಗಲಿದೆ ಎಂದು ವಿವರಿಸಿದರು.