News

ಅನುದಾನದ ಕೊರತೆಯಿಂದ ಹೈನುಗಾರಿಕೆಗೆ ಹೊಡೆತ

19 October, 2020 4:19 PM IST By:

ಮಳೆ ಕೈಕೊಟ್ಟು ಬರಗಾಲ ಆವರಿಸಿದಾಗ ಹಾಗೂ ಅತೀ ಮಳೆಯಾಗಿ ಬೆಳೆಗಳು ಕೊಚ್ಚಿಕೊಂಡು ಹೋದಾಗ ರೈತರ ಸಂಕಷ್ಟಕ್ಕೆ ನೆರವಾಗಲೆಂಬ ಕಾರಣಕ್ಕಾಗಿ  ಪಶುಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆರಂಭದಲ್ಲಿ ಈ ಯೋಜನೆಯು ರೈತರಿಗೆ ವರದಾನವಾಗಲಿದೆ ಎಂದು ಹೇಳಲಾಗುತ್ತಿತ್ತು.  ಆದರೆ ಈಗ ಈ ಪಶುಭಾಗ್ಯ ಯೋಜನೆಗೆ ಅನುದಾನ ಕೊರತೆಯಿಂದಾಗಿ ರೈತರಿಗೆ ಸಿಗುತ್ತಿಲ್ಲ ಯೋಜನೆಯ ಲಾಭ.

ಈ ಯೋಜನೆಯಡಿಯಲ್ಲಿ  ರೈತರಿಗೆ ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ ದೊರೆಯುತ್ತಿತ್ತು. ಎಮ್ಮೆ, ಆಕಳು ಖರೀದಿಗೆ 1.20 ಲಕ್ಷ ರೂ., ಕುರಿ, ಮೇಕೆ ಖರೀದಿಗೆ 67 ಸಾವಿರ ರೂ. ಸಹಾಯಧನ ನಿಗದಿ ಪಡಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ.50ರಷ್ಟು ಹಾಗೂ ಸಾಮಾನ್ಯ ವರ್ಗಕ್ಕೆ ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಉಳಿದ ಹಣವನ್ನು ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ವಿತರಿಸಲಾಗುತ್ತಿತ್ತು. ಆದರೀಗ ಯೋಜನೆಗೆ ಅನುದಾನದ ಕೊರತೆಯಿಂದಾಗಿ ರೈತರಿಗೆ ಲಾಭ ಸಿಗುತ್ತಿಲ್ಲ. ಬಡ ನಿರುದ್ಯೋಗಿಗಳು ಹೆಚ್ಚು ಹಣ ಕೊಟ್ಟು ಹೈನುಗಾರಿಕೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸಣ್ಣ ರೈತರು, ಕಾರ್ಮಿಕರು, ದೇವದಾಸಿಯರು ಸೇರಿದಂತೆ ನಿರ್ಗತಿಕರು ಸ್ವಂತವಾಗಿ ಬದುಕು ಕಟ್ಟಿಕೊಳ್ಳಲು ಪಶುಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. 

ಕೋರೋನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ ನಂತರ ನಗರಪ್ರದೇಶಗಳಿಗೆ ವಲಸೆ ಹೋಗಿದ್ದ ಹಲವಾರು ಕೂಲಿ ಕಾರ್ಮಿಕರು, ರೈತರು ತಮ್ಮೂರಿಗೆ ಬಂದಿದ್ದಾರೆ. ಪಶುಭಾಗ್ಯ ಯೋಜನೆಯಡಿಯಲ್ಲಾದರೂ ಸಾಲಸೌಲಭ್ಯ ಪಡೆದು ಜೀವನ ಸಾಗಿಸಬೇಕೆಂದುಕೊಂಡಿದ್ದರು. ಆದರೆ ಸರ್ಕಾರ ಈ ಯೋಜನೆಯಯಲ್ಲಿ ಅನುದಾನವಿಲ್ಲವೆಂದು ಹೇಳಲಾಗುತ್ತಿರುವುದರಿಂದ ರೈತರು ನಿರಾಶೆಯಲ್ಲಿದ್ದಾರೆ.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ನಾನಾ ಯೋಜನೆ ಹಣವನ್ನು ಜನರ ಸಂಕಷ್ಟಕ್ಕೆ ಬಳಸಲಾಯಿತು. ಅದರಂತೆ ಈ ಬಾರಿ ಕೊರೊನಾ ಸೋಂಕು ಹರಡಿದ್ದು, ಸೋಂಕು ತೊಲಗಿಸಲು ಹೆಚ್ಚಿನ ಹಣ ಬಳಸುತ್ತಿರುವುದರಿಂದ ಪಶುಭಾಗ್ಯ ಯೋಜನೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಈ ಕಾರಣದಿಂದ ಇಲಾಖೆಗೆ ನೀಡಲಾಗಿದ್ದ ಹೆಚ್ಚಿನ ಅನುದಾನ ಕಡಿತಗೊಳಿಸಲಾಗಿದೆ ಎನ್ನಲಾಗುತ್ತಿದೆ.

ಪಶುಭಾಗ್ಯ ಯೋಜನೆ ರೈತರ ಪಾಲಿಗೆ ಹೆಚ್ಚು ಅನುಕೂಲವಾಗಿದ್ದು, ಬಡವರು ಸ್ವಂತ ಜೀವನ ಕಟ್ಟಿಕೊಳ್ಳಲು ಅನುಕೂಲವಾಗಿದೆ. ಹೀಗಾಗಿ ಕೂಡಲೇ ಸರಕಾರ ಪಶುಭಾಗ್ಯ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಮುಂದಾಗಬೇಕೆಂದು ಪ್ರಗತಿಪರ ರೈತ ಮಹೇಶ ಕಲಾಲ್ ಹೇಳುತ್ತಾರೆ.

ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗಿತ್ತು:

ಹೈನುಗಾರಿಕೆಗೆ ಹಸು, ಎಮ್ಮೆ, ಕುರಿ, ಮೇಕೆ ಸಾಕಣೆಗೆ ಸಬ್ಸಿಡಿ ದೊರೆಯುತ್ತಿತ್ತು. ಇದು ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಬಹಳ ಅನುಕೂಲವಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಸರ್ಕಾರ ಅನುದಾನ ಸ್ಥಗಿತಗೊಳಿಸಿದೆ. ಮಳೆಯಿಂದಾಗಿ ಬೆಳೆ ಹಾಳಾಗಿದೆ. ಹೈನೋದ್ಯಮ ಮಾಡಿ ಜೀವನ ಸಾಗಿಸಬೇಕೆಂದುಕೊಂಡಿದ್ದೆ. ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಸ್ಥಗಿತಗೊಳಿಸಿದ್ದು ಸರಿಯಿಲ್ಲ ಎನ್ನುತ್ತಾರೆ ರಾಜು ಪೊದ್ದಾರ.