ಪಾರಿಜಾತ ಹೂವು ಎಂದ ತಕ್ಷಣ ನೆನಪಾಗುವುದು ಅದರ ಸುವಾಸನೆ. ಬಿಳಿ ಬಣ್ಣದ ಈ ಚಿಕ್ಕ ಹೂವಿನ ಮದ್ಯೆ ಹಾಗೂ ತೊಟ್ಟು ಹಳದಿ ಬಣ್ಣವನ್ನು ಹೊಂದಿರುವುದಲ್ಲದೆ ಅತ್ಯಂತ ಸುವಾಸನೆಭರಿತವಾಗಿರುತ್ತದೆ. ರಾತ್ರಿಯಲ್ಲಿ ಅರುಳುವುದರಿಂದ ಇದನ್ನು ರಾತ್ರಿಯ ರಾಣಿ ಎಂದೂ ಕರೆಯುತ್ತಾರೆ. ಸಣ್ಣ ಗಾಳಿ ಬಂದರೂ ಗಿಡದಿಂದ ಉದುರಿ ಹೋಗುವ ಅಷ್ಟೇ ಬೇಗ ಬಾಡಿ ಹೋಗುವ ಈ ಹೂವಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದರ ಉಪಯೋಗಗಳೇನೆಂಬುದನ್ನು ತಿಳಿಯಬೇಕಾದರೆ ಈ ಕೆಳಗಿನ ಮಾಹಿತಿ ಓದಿ....
ಪಾರಿಜಾತದ ಮೂಲ ದಕ್ಷಿಣ ಏಷ್ಯಾವಾಗಿದ್ದು, ನೇಪಾಳ ಮತ್ತು ಭಾರತದ ಉಷ್ಣವಲಯದ ಹಿಮಾಲಯಕ್ಕೆ ಸ್ಥಳೀಯವಾಗಿದೆ. ಪಾರಿಜಾತವಲ್ಲದೆ ಇದನ್ನು ಹವಳ ಮಲ್ಲಿಗೆ, ರಾತ್ರಿಯ ರಾಣಿ, ದು:ಖದ ಮರ, ಹಿಂದಿಯಲ್ಲಿ ಹರ- ಸಿಂಗಾರ, ಆಂಗ್ಲ ಭಾಷೆಯಲ್ಲಿ coral jasmine, night flowering jasmine, ವೈಜ್ಞಾನಿಕವಾಗಿ ನೈಕ್ಟಾಂಥಸ್ ಆರ್ಬರ್-ಟ್ರಿಸ್ಟಿಸ್ (Nyctanthes arbor-tristis) ಎಂದು ಕರೆಯುತ್ತಾರೆ. ಇದು ಒಲಿಯಾಸಿ ಎಂಬ ಕುಟುಂಬಕ್ಕೆ ಸೇರಿದ್ದು ಪಶ್ಚಿಮ ಬಂಗಾಳದ ರಾಜ್ಯದ ಹೂವಾಗಿದೆ.
ಅಲಂಕಾರಿಕ (decoration) ಉಪಯೋಗಗಳು:
- ಪಾರಿಜಾತವನ್ನು ಪ್ರಮುಖವಾಗಿ ಹರ(ಶಿವ)ನನ್ನು ಪೂಜಿಸಲು ಉಪಯೋಗಿಸುವ ಕಾರಣ ಇದಕ್ಕೆ “ಹರ-ಸಿಂಗಾರ” ಎಂಬ ಹೆಸರು ಬಂತು.
- ಹೂವಿನಿಂದ ಹಳದಿ ಬಣ್ಣವನ್ನು ತಗೆದು ಬಟ್ಟೆಗಳನ್ನು ರಂಗಾಗಿಸಲು ಉಪಯೋಗಿಸುತ್ತಾರೆ.
- ಕೇವಲ ಜಾಗದ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಪರಿಸರವನ್ನು ಮಾಲಿನ್ಯ ಮುಕ್ತ ಪ್ರದೇಶವನ್ನಾಗಿಸುತ್ತದೆ.\
- ಹೂಗಳು ತಂಬಾ ಪರಿಮಳಯುಕ್ತವಾಗಿದ್ದು, ಸುಗಂಧ ಧ್ರವ್ಯ ಮತ್ತು ಗಂಧದ ಕಡ್ಡಿಗಳನ್ನು ತಯಾರಿಸಲು ಬಳಸುತ್ತಾರೆ.
ಔಷಧಿ ಗುಣಗಳು:
- ಎಲೆಗಳಲ್ಲಿ ಡಿ-ಮಾನಿಟಾಲ್, ಆಸ್ಕೊರ್ಬಿಕ್ ಆಮ್ಲಾ, ಕ್ಯಾರೋಟಿನ್ ಜೊತೆಗೆ ಹಲವಾರು ಗ್ಲೈಕೋಸೈಡ್ ಮತ್ತು ಆಲ್ಕಾಲೈಡ್‍ಗಳಿದ್ದು ಎಲೆಗಳು ಕಹಿಯಾಗಿರುವುದಕ್ಕೆ ಕಾರಣವಾಗಿದೆ ಹಾಗಾಗಿ ಇದನ್ನು ಮಲೇರಿಯಾ, ಜ್ವರ, ಕೆಮ್ಮು ಮತ್ತು ಶೀತ ಸೇರಿದಂತೆ ಹಲವಾರು ಚಕಿತ್ಸೆಗೆ ಪರಿಣಾಮಕಾರಿ.
- ಮರದ ಬೀಜಗಳನ್ನು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲು ಉಪಯೋಗಿಸುತ್ತಾರೆ.
- ಎಲೆಗಳ ರಸವನ್ನು ಸ್ವಲ್ಪ ಸಕ್ಕರೆಯೊಂದಿಗೆ ಬೆರಿಸಿ ತಿಂದರೆ ಮಕ್ಕಳ ಹೊಟ್ಟೆಯ ಕಾಯಿಲೆಗಳನ್ನು ಗುಣ ಪಡಿಸಬಹುದು.
- ವಿಭಿನ್ನವಾದ ಫೇಸ್ ಪ್ಯಾಕ್‍ಗಳನ್ನು ತಯಾರಿಸಲು ಉಪಯೋಗಿಸುತ್ತಾರೆ ಏಕೆಂದರೆ ಇದು ಮುಖಕ್ಕೆ ಸುಂದರವಾದ ಹೊಳಪನ್ನು ನೀಡುತ್ತದೆ.
ಪರಿಮಳ ಭರಿತ ಹೂವುಗಳು (Flowers fragrant):
ಪಾರಿಜಾತವು ಸಣ್ಣ ಮರವಾಗಿದ್ದು ಸುಮಾರು 10 ಮೀ ಎತ್ತರ ಬೆಳೆಯುತ್ತದೆ ಹಾಗೂ ಇದರ ಎಲೆಗಳು ತುಂಬಾ ಆಕರ್ಷಕವಾಗಿದ್ದು 6-12 ಸೇಂ. ಮೀ. ಉದ್ದ ಹಾಗು 2-6 ಸೇಂ. ಮೀ. ಅಗಲವಿದೆ. ಹೂಗಳು ಪರಿಮಳ ಭರಿತವಾಗಿದ್ದು ದಳಗಳು ಬಿಳಿ ಬಣ್ಣ, ಹೂವಿನ ಮಧ್ಯಭಾಗ ಹಾಗೂ ತೊಟ್ಟು ಕೇಸರಿ-ಕೆಂಪು ಬಣ್ಣದಲ್ಲಿದ್ದು ಗೂಂಪು ಗುಂಪಾಗಿ ಬಿಡುತ್ತವೆ. ಒಂದು ಗುಂಪಿನಲ್ಲಿ ಸುಮಾರು 2-7 ಹೂಗಳಿರುತ್ತವೆ, ಹಣ್ಣುಗಳು ಒಂದು ಬೀಜವನ್ನು ಒಳಗೊಂಡು ಹೃದಯಾಕಾರ ಅಥವಾ ವೃತ್ತಾಕಾರದಲ್ಲಿದ್ದು ಕಂದು ಬಣ್ಣ ಹೊಂದಿದೆ.
ಆರೈಕೆ (care):
ಪಾರಿಜಾತವು ಉಷ್ಣವಲಯದ ಮರವಾಗಿದ್ದು ಇದಕ್ಕೆ ಹೆಚ್ಚಿನ ನಿರ್ವಹಣೆ ಮತ್ತು ಆರೈಕೆಯ ಅಗತ್ಯವಿಲ್ಲ. ಆದರೆ ನಮ್ಮ ಉದ್ಯಾನದ ಇತರ ಸಸ್ಯಗಳಂತೆ ನೋಡಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನಿಂತ ನೀರು ಈ ಗಿಡದ ದೊಡ್ಡ ಶತ್ರು ಇದರಿಂದ ಬೇರುಗಳು ಕೊಳೆತು ಅಂತಿಮವಾಗಿ ಸಾಯಬಹುದು. ಸಸ್ಯವು ಸರಿಯಾಗಿ ಬೆಳೆಯಲು ಕೆಲವು ಗಂಟೆಗಳ ಕಾಲ ನೇರ ಸೂರ್ಯನ ಬೆಳಕು ಹಾಗೂ ಫಲವತ್ತಾದ ಮಣ್ಣು ಬೇಕು. ಹೆಚ್ಚು ಲವಣಯುಕ್ತ ಮಣ್ಣು ಬೇರುಗಳನ್ನು ಹಾನಿಗೊಳಿಸುತ್ತದೆ.
ಕವನ, ಜಿ. ಬಿ., ಚಂದ್ರಶೇಖರ್, ಎಸ್. ವೈ. ಮತ್ತು ಪವಿತ್ರ, ಎಸ್
ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ