ನವದೆಹಲಿ: ಪಾಕಿಸ್ತಾನದ ಒಂದು ವಿಮಾನವನ್ನು ನಾವು ಹೊಡೆದು ಉರುಳಿಸಿದ್ದೇವೆ ಎಂದು ಭಾರತ ಅಧಿಕೃತವಾಗಿ ಹೇಳಿಕೆ ನೀಡಿದೆ.
ಬುಧವಾರ ಮಧ್ಯಾಹ್ನ ವಿದೇಶಾಂಗ ವ್ಯವಹಾರಗಳ ಖಾತೆಯ ಕಾರ್ಯದರ್ಶಿ ರವೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.
ಜೈಷ್ ಉಗ್ರರ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಸೇನೆ ಇಂದು ಬೆಳಗ್ಗೆ ದಾಳಿ ಮಾಡಿದೆ. ಈ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸುವ ವೇಳೆ ಪಾಕಿಸ್ತಾನದ ಒಂದು ವಿಮಾನ ಪತನವಾಗಿದೆ ಎಂದು ತಿಳಿಸಿದರು.
ಪಾಕ್ ವಾಯುಸೇನೆಯನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲಟ್ ನಮ್ಮ ಬಳಿ ಇದ್ದಾರೆ ಎಂದು ಹೇಳುತ್ತಿದೆ. ಈ ಮಾಹಿತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ವಿಮಾನ ಪತನಗೊಂಡಿರುವ ವಿಚಾರವನ್ನು ಭಾರತ ಖಚಿತ ಪಡಿಸಿದ್ದು ಯಾವ ವಿಮಾನ ಎನ್ನುವುದು ತಿಳಿದು ಬಂದಿಲ್ಲ. ಪಾಕಿಸ್ತಾನ ಎಫ್ 16 ವಿಮಾನವನ್ನು ವಾಯುಸೇನೆ ಹೊಡೆದಿದೆ ಎಂದು ಸೇನೆಯ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ಸೇನೆ ಇಬ್ಬರು ಭಾರತೀಯ ಪೈಲಟ್ ಗಳು ನಮ್ಮ ಬಳಿ ಇದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಪಾಕಿಸ್ತಾನದ ಈ ಆರೋಪಕ್ಕೆ ಭಾರತ ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಭಾರತ ನಾವು ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ್ದೇವೆಯೇ ಹೊರತು ಪಾಕಿಸ್ತಾನದ ಮಿಲಿಟರಿ ಮತ್ತು ನಾಗರಿಕರ ನೆಲೆ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಆದರೆ ಪಾಕಿಸ್ತಾನ ಇಂದು ವಾಯುಸೇನೆಯ ಮೂಲಕ ಭಾರತದ ಸೇನೆಯ ಮೇಲೆ ದಾಳಿ ನಡೆಸಿದೆ.
ಪಾಕ್ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ – ಭಾರತದ ಅಧಿಕೃತ ಹೇಳಿಕೆ
27 February, 2019 4:41 PM IST