News

ಭತ್ತದ ಬೆಲೆ ಇಳಿಯಲು ಕಾರಣವಾದ ಅಕ್ಕಿ ಬೇಡಿಕೆ ಕುಸಿತ

03 June, 2021 4:58 PM IST By: KJ Staff
ಯಂತ್ರದ ಮೂಲಕ ಭತ್ತ ಕಟಾವು ಮಾಡುತ್ತಿರುವುದು

ರಾಜ್ಯದಾದ್ಯಂತ ಭತ್ತದ ಬೆಳೆಯ ಕಟಾವು ಕಾರ್ಯ ಭರದಿಂದ ನಡೆಯುತ್ತಿದೆ. ತುಂಗಾ, ಭದ್ರಾ, ತುಂಗಭದ್ರಾ, ಆಲಮಟ್ಟಿ, ಕೆಆರ್‌ಎಸ್ ಮತ್ತಿತರ ಜಲಾಶಯಗಳ ವ್ಯಾಪ್ತಿಯ ನೀರಾವರಿ ಭೂಮಿಯಲ್ಲಿ ರೈತರು ಭತ್ತ ಬೆಳೆಯುತ್ತಿದ್ದು, ಬಹುತೇಕ ಎಲ್ಲ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲೂ ಈಗಾಗಲೇ ಭತ್ತದ ಕಟಾವು ಕಾರ್ಯ ನಡೆಯುತ್ತಿದೆ.

ಮೂಲ ಒಂದರ ಪ್ರಕಾರ ಕರ್ನಾಟಕ ರಾಜ್ಯದ 14 ಜಿಲ್ಲೆಗಳ ವ್ಯಾಪ್ತಿಯ, ಸುಮಾರು 7.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ (ರಾಜ್ಯದ ಒಒಟ್ಟು ಕಋಷಿ ಭೂಮಿಯಲ್ಲಿ ಶೇ.54.1 ಭಾಗ). ಗಂಗಾವತಿ, ಮಹಾರಾಷ್ಟçದ ಗಡಿ ಭಾಗದಲ್ಲಿನ ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ಈಗಾಗಲೇ ಕಟಾವು ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಆದರೆ, ದಾವಣಗೆರೆ, ಶಿವಮೊಗ್ಗ ಹಾಗೂ ಅಕ್ಕಪಕ್ಕದ ಇರತೆ ಜಿಲ್ಲೆಗಳಲ್ಲಿ ಶೇ.30ರಷ್ಟು ಕಟಾವು ಇನ್ನೂ ಬಾಕಿ ಇದೆ. ಈ ನಡುವೆ ಭತ್ತದ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಆರಂಭದಲ್ಲಿ ಉತ್ತಮ ಬೆಲೆ

ರಾಜ್ಯದ ರೈತರು ಸಣ್ಣ ಭತ್ತದ ಅಂದರೆ, ಸೋನಾ ಮಸೂರಿ ತಳಿಗಳನ್ನು ಹೆಚ್ಚಾಗಿ ಬೆಳೆದಿದ್ದಾರೆ. ಆರಂಭದಲ್ಲಿ ಭತ್ತ ಕಟಾವು ಮಾಡಿದ ರೈತರು ಒಂದು ಕ್ವಿಂಟಾಲ್ ಭತ್ತವನ್ನು 1800 ರೂ.ವರೆಗೆ ಮಾರಾಟ ಮಾಡಿದ್ದಾರೆ. ಆದರೆ, ಪ್ರಸ್ತುತ ಕಟಾವು ಮಾಡಿದ ರೈತರಿಗೆ 1600 ರೂ. ಕೂಡ ಸಿಗುತ್ತಿಲ್ಲ. ಇನ್ನೊಂದೆಡೆ ಸೋನ ಮಾದರಿಯ ಮತ್ತೊಂದು ತಳಿ ಬೆಳೆದ ರೈತರ ಪಾಡು ಕೇಳುವಂತಿಲ್ಲ. ಈ ಹಿಂದಿನ ಬೆಳೆ ವೇಳೆ ಈ ತಳಿ ಭತ್ತ 2,650 ರೂ.ವರೆಗೆ ಮಾರಾಟವಾಗಿತ್ತು. ಆದರೆ, ಈ ಬಾರಿ ಭತ್ತದ ಬೆಲೆ ಬಿದ್ದಿದೆ. ಪ್ರಸ್ತುತ ಕಟಾವು ಸೀಸನ್‌ನ ಆರಂಭದಲ್ಲಿ ಕೆಲವು ರೈತರು 2,100 ರೂ.ಗೆ ಒಂದು ಕ್ವಿಂಟಾಲ್ ಭತ್ತ ಮಾರಾಟ ಮಾಡಿದ್ದಾರೆ. ಆದರೆ ಮೇ ಅಂತ್ಯ ಹಾಗೂ ಜುಲೈ ಆರಂಭದಿAದ ಕಟಾವು ಆರಂಭಿಸಿದ ರೈತರ ಕ್ವಿಂಟಾಲ್ ಭತ್ತಕ್ಕೆ 1800 ರೂ. ಕೂಡ ಸಿಗುತ್ತಿಲ್ಲ.

ನಿರೀಕ್ಷೆಯಂತೆ ಬೆಲೆ ಇಲ್ಲ

ಈ ಬಾರಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ನಿರಿಕ್ಷೆ ಹುಸಿಯಾಗಿದೆ. ಇತ್ತೀಚೆಗೆ ಭತ್ತ ಬೆಳೆಯುವ ಖರ್ಚು ಹೆಚ್ಚಾಗಿದೆ. ಒಂದೆಡೆ ರಸಗೊಬ್ಬರ, ಕೀಟನಾಶಕಗಳ ಬೆಲೆ ಹೆಚ್ಚಾದರೆ, ಮತ್ತೊಂದೆಡೆ ಭತ್ತಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಈ ನಡುವೆ ಮಳೆ ಕೂಡ ಆರಂಭವಾಗಿದೆ. ಇಂಥ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದಾರೆ. ಮಳೆಗೆ ಸಿಲುಕಿ ಬೆಳೆ ಹಾಳಾಗುವುದರಿಂದ ಆಗುವ ನಷ್ಟವನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ರೈತರು, ಬಂದ ಬೆಲೆಗೆ ಭತ್ತ ಮಾರಾಟ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಭತ್ತ ಬೆಳೆಗಾರ ಮಂಜುನಾಥ ತಿಮ್ಮಿನಕಟ್ಟಿ.

ಭತ್ತವನ್ನು ಚೀಲಕ್ಕೆ ತುಂಬುತ್ತಿರುವ ಕೆಲಸಗಾರರು.

ಮಿಲ್‌ನವರು ಕೊಳ್ಳುತ್ತಿಲ್ಲ

ರೈತರಿಗೆ ಭತ್ತಕ್ಕೆ ಬೆಲೆ ಇಲ್ಲ ಎಂಬ ಚಿಂತೆಯಾದರೆ, ವ್ಯಾಪಾರಿಗಳಿಗೆ ತಮ್ಮ ಬಳಿ ಇರುವ ಭತ್ತವನ್ನು ರೈಸ್‌ಮಿಲ್‌ನವರು ಕೊಳ್ಳುತ್ತಿಲ್ಲ ಎಂಬ ಚಿಂತೆ. ಕೆಳದ ಒಂದು ವರ್ಷದಿಂದ ಕೊರೊನಾ ಸೋಂಕು ವ್ಯಾಪಿಸಿದ್ದು, ಬಹುತೇಕ 6 ತಿಂಗಳು ಲಾಕ್‌ಡೌನ್ ಜಾರಿಯಲ್ಲಿತ್ತು. ಈಗಲೂ ಎಲ್ಲಾ ಲಾಕ್ ಆಗಿದೆ. ಈ ನಡುವೆ ಮದುವೆ ಮತ್ತಿತರ ಸಮಾರಂಭಗಳು ಕೂಡ ನಡೆಯುತ್ತಿಲ್ಲ. ಹೀಗಾಗಿ ಅಕ್ಕಿಗೆ ಬೇಡಿಕೆ ಕುಸಿದಿದೆ. ಇದರಿಂದ ರೈಸ್‌ಮಿಲ್‌ಗಳಲ್ಲಿ ಅಕ್ಕಿ ಸ್ಟಾಕ್ ಉಳಿದಿರುವ ಕಾರಣ, ಹೊಸದಾಗಿ ಭತ್ತ ಖರೀದಿಸಲು ರೈಸ್‌ಮಿಲ್‌ಗಳ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಬೆಲೆ ಕೊಟ್ಟು ರೈತರಿಂದ ಭತ್ತ ಖರೀದಿಸಿದರೆ ದೊಡ್ಡ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ’ ಎಂಬುದು ಶಿವಮೊಗ್ಗ ಮೂಲದ ಭತ್ತದ ವ್ಯಾಪಾರಿ ಪುರುಷೋತ್ತಮ್ ಜಿ.ಕೆ ಅವರ ಅಳಲು.

ಅಕ್ಕಿಗೆ ಬೇಡಿಕೆಯಿಲ್ಲ

‘ಮೊದಲಿನಂತೆ ಅಕ್ಕಿ ವ್ಯಾಪಾರವಾಗುತ್ತಿಲ್ಲ. ಮದುವೆ ಮತ್ತಿತರ ದೊಡ್ಡ ಸಮಾರಂಭಗಳು ನಡೆಯುತ್ತಿಲ್ಲ. ಹಾಸ್ಟೆಲ್, ಪಿಜಿಗಳೂ ಮುಚ್ಚಿವೆ. ಕೇಟರಿಂಗ್ ಸೇವೆ ಕುಡ ಸ್ಥಗಿತಗೊಂಡಿದೆ. ಇತ್ತ ಹೋಟೆಲ್‌ಗಳೂ ಬಾಗಿಲು ಹಾಕಿವೆ. ಇವೆಲ್ಲದರ ಪರಿಣಾಮವಾಗಿ ಅಕ್ಕಿಗೆ ಬೇಡಿಕೆ ಕುಸಿದಿದೆ. ನಮ್ಮ ರೈಸ್‌ಮಿಲ್‌ನಲ್ಲೇ ನೂರಾರು ಟನ್ ಅಕ್ಕಿ ಸ್ಟಾಕ್ ಇದೆ. ಆದರೂ ರೈತರ ಶ್ರಮ ಗಮನಿಸಿ ಆದಷ್ಟು ಹೆಚ್ಚಿನ ಬೆಲೆಗೆ ಭತ್ತ ಖರೀದಿಸುತ್ತಿದ್ದೇವೆ,’ ಎಂದು ಶ್ರೀ ಕುರುವತ್ತಿ ರೈಸ್ ಇಂಡಸ್ಟಿçÃಸ್ ಮಾಲೀಕ ಸುರೇಶ್ ಕುಮಾರ್ ಹೇಳುತ್ತಾರೆ.

ಈ ನಡುವೆ ನೀರಾವರಿ ಪ್ರದೇಶದ ಬಹುತೇಕ ರೈತರು ಭತ್ತದ ಗದ್ದೆಗಳನ್ನು ಅಡಕೆ ತೋಟಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಭತ್ತದ ಕೃಷಿಗೆ ಖರ್ಚು ಹೆಚ್ಚು. ಹೆಚ್ಚಿನ ಪ್ರಮಾಣದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸಬೇಕು. ಅಲ್ಲದೆ ಇತ್ತೀಚೆಗೆ ಕೃಷಿ ಕಾರ್ಮಿಕರ ಕೊರತೆ ಕುಡ ಎದುರಾಗಿರುವ ಕಾರಣ ಭತ್ತ ಬೆಳೆಗಾರರು ಬೇರೆ ಬೆಳೆ ಬೆಳೆಯುವ ನಿಟ್ಟಿನಲ್ಲಿ ಗಮನಹರಿಸುತ್ತಿದ್ದಾರೆ. ಜೊತೆಗೆ ಬೆಲೆ ಅನಿಶ್ಚಿತತೆ ಕೂಡ ರೈತರ ಈ ನಿರ್ಧಾರಕ್ಕೆ ಕಾರಣವಾಗಿದೆ.