News

ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ

04 December, 2021 11:19 AM IST By: KJ Staff
paddy harvester machine

ಜಿಲ್ಲಾಡಳಿತಗಳ ಆದೇಶಕ್ಕೆ ಬೆಲೆ ಕೊಡದ ಯಂತ್ರಗಳ ಮಾಲೀಕರು; ಡೀಸೆಲ್ ಬೆಲೆ ಹೆಚ್ಚಳದ ಸಬೂಬು

ರಾಜ್ಯದ ಭತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ರಾಯಚೂರು-ಗಂಗಾವತಿ ಭಾಗದಲ್ಲಿ ತ್ತದ ಬೆಳೆಯ ಕಟಾವು ಕಾರ್ಯ ಚುರುಕಾಗಿದೆ. ಆದರೆ ಈ ಬಾರಿ ಭತ್ತ ಕಟಾವು ಮಾಡುವ ಯಂತ್ರದ ಬಾಡಿಗೆ ರೈತರನ್ನು ಹೈರಾಣು ಮಾಡಿದೆ. ಕಳೆದ ಬಾರಿ ಗಂಟೆ ಒಂದಕ್ಕೆ 2800 ರೂ. ವರೆಗೆ ಬಾಡಿಗೆ ಪಡೆಯುತ್ತಿದ್ದ ಯಂತ್ರಗಳ ಮಾಲೀಕರು, ಈ ಬಾರಿ 3200 ರಿಂದ 3500 ರೂ. ಕೇಳುತ್ತಿದ್ದಾರೆ.

ರಾಯಚೂರು ಮಾತ್ರವಲ್ಲದೆ, ರಾಜ್ಯದಲ್ಲಿ ಭತ್ತ ಬೆಳೆಯುವ ದಾವಣಗೆರೆ, ಮಂಡ್ಯ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಲ್ಲೂ ಭತ್ತ ಕಟಾವು ಯಂತ್ರಗಳ ಬೆಲೆ ದುಬಾರಿಯೇ ಇದೆ. ಹೀಗಾಗಿ ಭತ್ತ ಬೆಳೆಗಾರರ ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ. ಭತ್ತಕ್ಕೆ ಉತ್ತಮ ಬೆಲೆ ಸಿಕ್ಕರೂ, ಬಾಡಿಗೆಗೆ ಹೆಚ್ಚು ಹಣ ನೀಡಬೇಕಾದ್ದರಿಂದ ಬೆಲೆ ಹೆಚ್ಚಳದ ಪ್ರಯೋಜನ ಸಿಗುವುದಿಲ್ಲ ಎಂಬುದು ರೈತರ ಅಳಲು.

‘ನಾನು 8 ಎಕರೆ ಗದ್ದೆಯಲ್ಲಿ ಭತ್ತ ನಾಟಿ ಮಾಡುತ್ತೇನೆ. ಪ್ರತಿ ವರ್ಷ 20,000 ರೂ.ವರೆಗೆ ಭತ್ತ ಕಟಾವು ಯಂತ್ರದ ಬಾಡಿಗೆ ವೆಚ್ಚವಾಗುತ್ತಿತ್ತು. ಆದರೆ ಈ ಬಾರಿ ಅದು 30,000 ರೂ. ಮೀರಿದೆ. ಕಳೆದ ವರ್ಷ ಒಟ್ಟು 9 ಗಂಟೆ ಕಾಲ ಯಂತ್ರ ಭತ್ತ ಕಟಾವು ಮಾಡಿತ್ತು. ಈ ಬಾರಿ ಅಷ್ಟೇ ಹೊಲದಲ್ಲಿ ಬೆಳೆದ ಭತ್ತ ಕಟಾವು ಮಾಡಲು 11 ತಾಸು ಹಿಡಿದಿದೆ. ಸತತ ಮಳೆಯಿಂದ ಗದ್ದೆ ಒಣಗಿಲ್ಲ. ಇದರಿಂದ ಯಂತ್ರಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗದೆ, ಕಟಾವು ಅವಧಿ ಹೆಚ್ಚಾಗುತ್ತಿದೆ. ಇದರೊಂದಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಬಾಡಿಗೆ ಕೂಡ 500 ರೂ. ಹೆಚ್ಚಾಗಿದೆ. ಗಂಟೆಗೆ 3,200 ರೂ. ಬಾಡಿಗೆಯಂತೆ ಈ ಸಲ 8 ಎಕರೆ ಭತ್ತ ಕಟಾವಿಗೆ 35,200 ರೂ. ವೆಚ್ಚವಾಗಿದೆ’ ಎಂದು ಹೇಳಿದವರು ಗಂಗಾವತಿಯ ಭತ್ತ ಬೆಳೆಗಾರ ರುದ್ರೇಶ್ ಕೊಪ್ಪದ.

ಜಿಲ್ಲಾಡಳಿತದ ಆದೇಶ

ಭತ್ತ ಕಟಾವು ಯಂತ್ರದ ಮಾಲೀಕರು ಮನಬಂದAತೆ ಬಾಡಿಗೆ ಕೇಳುವುದನ್ನು ತಡೆಯುವ ಉದ್ದೇಶದಿಂದ ಭತ್ತ ಬೆಳೆಯುವ ಜಿಲ್ಲೆಗಳ ಆಡಳಿತ ಅಂದರೆ, ಜಿಲ್ಲಾಧಿಕಾರಿಗಳು ಭತ್ತ ಕಟಾವು ಹಂಗಾಮು ಆರಂಭಕ್ಕೆ ಮುನ್ನವೇ ಗಂಟೆಗೆ ಇಂತಿಷ್ಟು ಬಾಡಿಗೆ ಎಂದು ನಿಗದಿ ಮಾಡಿ ಆದೇಶ ಹೊರಡಿಸಿವೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಗಂಟೆಗೆ 1800 ರೂ. (ಟೈರ್ ಯಂತ್ರ) ರಿಂದ 2250 ರೂ. (ಬೆಲ್ಟ್ ಯಂತ್ರ) ವರೆಗೆ ಬಾಡಿಗೆ ನಿಗದಿ ಮಾಡಿವೆ. ಆದರೆ ಯಂತ್ರಗಳ ಮಾಲೀಕರು 3200ರಿಂದ 3500 ರೂ. ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಮೂಲಕ ಬಾಡಿಗೆ ನಿಗದಿ ಮಾಡಿ ಜಿಲ್ಲಾಡಳಿತ ಹೊರಡಿಸಿದ್ದ ಸುತ್ತೋಲೆಗೆ ಬೆಲೆಯೇ ಇಲ್ಲದಂತಾಗಿದೆ. ದುಬಾರಿ ಬಾಡಿಗೆಯಿಂದ ಹೈರಾಣಾಗಿರುವ ರೈತರು, ತಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳುವುದು ಎಂದು ತೋಚದೆ ಕಂಗಾಲಾಗಿದ್ದಾರೆ. ಇತ್ತ ಯಂತ್ರಗಳ ಮಾಲೀಕರು ಡೀಸೆಲ್ ಬೆಲೆ ಹೆಚ್ಚಳದ ಕಾರಣ ಮುಂದಿಟ್ಟುಕೊAಡು ಹೆಚ್ಚು ಬಾಡಿಗೆ ಕೇಳುತ್ತಿದ್ದಾರೆ.

ಒಂದೊAದು ಭಾಗದಲ್ಲಿ ಒಂದೊAದು ರೀತಿ ದರವನ್ನು ಯಂತ್ರದ ಮಾಲೀಕರು ಪಡೆಯುತ್ತಿದ್ದಾರೆ. ದಾವಣಗೆರೆ ಭಾಗದಲ್ಲಿ ಎಲ್ಲ ರೀತಿಯ (ಟೆಐರ್, ಬೆಲ್ಟ್) ಯಂತ್ರಗಳಿಗೆ 3500 ರೂ. ಬಾಡಿಗೆ ನಿಗದಿ ಮಾಡಿದ್ದಾರೆ. ಈ ದರ ಜಿಲ್ಲಾಡಳಿತ ನಿಗದಿ ಮಾಡಿರುವ ದರಕ್ಕಿಂತ 1200 ರೂ. ಹೆಚ್ಚಾಗಿದೆ. ಇನ್ನು ಗಂಗಾವತಿ ಭಾಗದಲ್ಲೂ ಪರಿಸ್ಥಿತಿ ಹೀಗೇ ಇದೆ. ಅಲ್ಲಿ ಕೂಡ 3300ರಿಂದ 3600 ರೂ. ಬಾಡಿಗೆ ಪಡೆಯಲಾಗುತ್ತಿದೆ. ಕೆಲವು ಕಡೆ ದರ ಹೆಚ್ಚಳ ಕುರಿತು ರೈತರು-ಯಂತ್ರಗಳ ಮಾಲೀಕರ ನಡುವೆ ಗಲಾಟೆಗಳು ಕೂಡ ನಡೆದಿವೆ.

ರೈತರ ಅನಿವಾರ್ಯತೆ

ಸೈಕ್ಲೋನ್ ಎಫೆಕ್ಟಿನಿಂದಾಗಿ ರಾಜ್ಯದ ಹಲವೆಡೆ ಈಗ ಮಳೆ ಬರುತ್ತಿದೆ. ಇದು ಭತ್ತ ಕಟಾವು ಸಮಯವಾಗಿರುವ ಕಾರಣ ಮಳೆ ಬಂದರೆ ಕಟಾವು ಕಷ್ಟ. ಹೀಗಾಗಿ ಆದಷ್ಟು ಬೇಗ ಭತ್ತ ಕಟಾವು ಮಾಡಿಸುವುದು ಎಲ್ಲಾ ರೈತರ ಆಲೋಚನೆ. ಆದರೆ, ರೈತರ ಈ ಪರಿಸ್ಥಿತಿಯ ಲಾಭ ಪಡೆಯಲು ನಿಂತಿರುವ ಭತ್ತ ಕಟಾವು ಯಂತ್ರಗಳ ಮಾಲೀಕರು ಜಿಲ್ಲಾಡಳಿತಗಳು ನಿಗದಿ ಮಾಡಿರುವ ದರಕ್ಕಿಂತ 1200 ರೂ. ಹೆಚ್ಚಿಗೆ ಕೇಳುತ್ತಿದ್ದಾರೆ. ಮಳೆಗೆ ಸಿಲುಕಿ ಭತ್ತ ಹಾಳಾದರೆ ಹಾಕಿದ ಬಂಡವಾಳವೆಲ್ಲಾ ನೀರಲ್ಲಿ ಕೊಚ್ಚಿ ಹೋಗುತ್ತದೆ ಎಂಬ ಕಾರಣದಿಂದ, ಯಂತ್ರಗಳ ಮಾಲೀಕರು ಕೇಳಿದಷ್ಟು ಹಣವನ್ನು ನೀಡಲೇಬೇಕಾದ ಅನಿವಾರ್ಯತೆ ರೈತರಿಗೆ ಎದುರಾಗಿದೆ.

ಅಧಿಕಾರಿಗಳು ಕೇರ್ ಮಾಡಲ್ಲ

“ರೈತರೆಂದರೆ ಅಧಿಕಾರಿಗಳು, ಆಡಳಿತ ಎಲ್ಲರಿಗೂ ಅಸಡ್ಡೆ. ಬಾಯಿ ಮಾತಿನಲ್ಲಿ ಅನ್ನದಾತ ಎಂದು ಕರೆದರೂ. ಆತನಿಗೆ ಸಿಗಬೇಕಾದ ನಿಜವಾದ ಗೌರವ, ರಕ್ಷಣೆ ಸಿಗುತ್ತಿಲ್ಲ. ಒಮ್ಮೆ ಯಂತ್ರಗಳ ಬಾಡಿಗೆ ನಿಗದಿ ಮಾಡಿ ಆದೇಶ ಹೊರಡಿಸುವ ಜಿಲ್ಲಾಧಿಕಾರಿಗಳು, ತಮ್ಮ ಆದೇಶ ಪಾಲನೆ ಆಗುತ್ತಿದೆ ಯೋ ಇಲ್ಲವೋ ಎಂದು ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ರೈತರು ಸ್ಥಳೀಯ ಕೃಷಿ ಅಧಿಕಾರಿಗಳಿಗೆ ದೂರು ನೀಡಿದರೂ ಅದನ್ನು ಪರಿಹರಿಸುವುದಿರಲಿ, ದೂರಿನ ಪ್ರತಿಯನ್ನು ನೋಡುವ ತಾಳ್ಮೆ ಕೂಡ ಅವರಿಗೆ ಇರುವುದಿಲ್ಲ. ಯಾವೊಬ್ಬ ಅಧಿಕಾರಿಯೂ ರೈತರ ಸಮಸ್ಯೆ ಆಲಿಸಿ, ಯಂತ್ರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರಿಸುವುದಿಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ಅಧಿಕಾರಿಗಳು ಯಂತ್ರಗಳ ಮಾಲೀಕರ ಜತೆ ಶಾಮೀಲಾಗಿರುವ ಶಂಕೆ ಹುಟ್ಟುತ್ತದೆ,” ಎನ್ನುತ್ತಾರೆ ಭದ್ರಾ ಅಚ್ಚುಕಟಟ್ಟು ಭಾಗದ ರೈತ ಆನಗೋಡು ಆಂಜಿನಪ್ಪ.