News

ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆ-ಸರ್ಕಾರದ ನಿಯಂತ್ರಣ ಏಕಿಲ್ಲ?

06 November, 2020 6:48 PM IST By:

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಭತ್ತದ ಕಟಾವು ಚುರುಕು ಪಡೆದಿದೆ. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಭತ್ತದ ಕಟಾವು ನಡೆಯುತ್ತಿದೆ. ಆದರೆ ಕೊರಾನಾ ಸಂಕಷ್ಟದಲ್ಲಿರುವ ರೈತರಿಗೆ ಈಗ ಭತ್ತದ ಕಟಾವು ಯಂತ್ರಗಳಿಗೆ ದುಬಾರಿ ಬೆಲೆ ಕೊಡುವ ಅನಿವಾರ್ಯತೆ ಎದುರಾಗಿದೆ.  ಖಾಸಗಿಯವರು ಪ್ರತಿ ಗಂಟೆಗೆ 2500-2800 ರೂಪಾಯಿಯವರೆಗೆ ಮೊತ್ತ ವಿಧಿಸಲಾಗುತ್ತಿರುವುದರಿಂದ ರೈತರಿಗೆ ತುಂಬಾ ಹೊರೆಯಾಗುತ್ತಿದೆ. ಸರ್ಕಾರವೇ ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆಯನ್ನು ನಿಯಂತ್ರಿಸಬೇಕೆಂದು ಎಲ್ಲೆಡೆ ಒತ್ತಾಯ ಕೇಳಿಬರುತ್ತಿದೆ.

ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ರೈತರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಜಿಲ್ಲಾಧಿಕಾರಿಗಳು ಭತ್ತ ಕಟಾವು ಯಂತ್ರಗಳ ದುಬಾರಿ ಬಾಡಿಗೆಯನ್ನು ತಡೆಯಲು ಕ್ರಮಕೈಗೊಂಡಿವೆ. ಜಿಲ್ಲಾಡಳಿತ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆ ಪಡೆದರೆ ಸೂಕ್ತ ಕಾನೂನು ಕ್ರಮಕೈಗೊಳ್ಳುತ್ತೇವೆಂದು ಎಚ್ಚರಿಗೆ ನೀಡಿದ್ದರಿಂದ ಆಯಾ ಜಿಲ್ಲೆಗಳಲ್ಲಿ ನಿಯಂತ್ರಣಕ್ಕೆ ಬಂದಿದೆ. ಆದರೆ ಇತರ ಜಿಲ್ಲೆಗಳಲ್ಲಿ  ಹೆಚ್ಚಿನ ಬಾಡಿಗೆ ದರ ಪಡೆಯಲಾಗುತ್ತಿರುವುದರಿಂದ ಸರ್ಕಾರವೇ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

 ದಾವಣಗೆರೆ ಜಿಲ್ಲೆಯಲ್ಲಿ ಖಾಸಗಿ ಭತ್ತ ಕಟಾವು ಯಂತ್ರಗಳು ರೈತರಿಂದ ದುಬಾರಿ ಬೆಲೆ ಕೇಳಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈಗ ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂಬುದು ರೈತರ ಒತ್ತಾಯವಾಗಿದೆ.

ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಭತ್ತದ ಕಟಾವು ಯಂತ್ರಗಳಿಗೆ ಪ್ರತಿಗಂಟೆಗೆ 1800 ರೂಪಾಯಿ ಮೀರದಂತೆ ಬಾಡಿಗೆ ನಿಗದಿಪಡಿಸಬೇಕು. ತಪ್ಪಿದಲ್ಲಿ ಭತ್ತ ಕಟಾವು ಯಂತ್ರದ ಮಾಲಿಕರ ವಿರುದ್ಧ ವಿಪತ್ತು ನಿರ್ವಹಣಾ ಕಾ.ದೆ 2005 ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು  ಎಂದು ಇತ್ತೀಚೆಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಕಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಭತ್ತ ಬೆಳೆ ಕಟಾವು ಮಾಡಲು ಭತ್ತ ಕಟಾವು ಯಂತ್ರಗಳಿಗೆ ಗರಿಷ್ಠ ರೂ.1900 ಗಳ ದರವನ್ನು ನಿಗದಿ ಪಡಿಸಿದ್ದು, ನಿಗದಿತ ದರವನ್ನು ಭತ್ತ ಕಟಾವು ಯಂತ್ರಗಳ ಮಾಲೀಕರು ತಪ್ಪದೇ ಪಾಲಿಸಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸಹ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 55,068 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಬೆಳೆಯು ಕಟಾವಿನ ಹಂತದಲ್ಲಿದ್ದು, ಹಲವು ಕಡೆ ಭತ್ತದ ಕಟಾವು ಪ್ರಾರಂಭವಾಗಿರುತ್ತದೆ. ಜಿಲ್ಲೆಯಲ್ಲಿ ಶೇ. 95 ರಷ್ಟು ರೈತರು ಭತ್ತದ ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿರುತ್ತಾರೆ. ಭತ್ತದ ಕಟಾವು ಯಂತ್ರದ ಬಾಡಿಗೆ ದರವನ್ನು ನಿಗದಿಪಡಿಸಲು ರೈತರ ಕೋರಿಕೆ ಮೇರೆಗೆ ಉಪ ಕೃಷಿ ನಿರ್ದೇಶಕರು ಹಾಗೂ ಗಂಗಾವತಿ ತಹಶೀಲ್ದಾರರ ನೇತೃತ್ವದಲ್ಲಿ ಭತ್ತ ಬೆಳೆ ಕಟಾವು ಯಂತ್ರದ ಮಾಲೀಕರು ಹಾಗೂ ರೈತರು ಮತ್ತು ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ದರವನ್ನು ಪ್ರತಿ ಗಂಟೆಗೆ ಬಾಡಿಗೆ ಗರಿಷ್ಠ ರೂ.1900 ನಿಗದಿಪಡಿಸಲಾಗಿದ್ದು, ಕಟಾವು ಯಂತ್ರಗಳ ಮಾಲೀಕರು ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಸೊಂಕಿನ ಸಂಕಷ್ಟದ ಸಂದರ್ಭದಲ್ಲಿ ಭತ್ತ ಬೆಳೆದ ರೈತರಿಗೆ ಪ್ರತಿ ಗಂಟೆಗೆ ಗರಿಷ್ಠ 2 ಸಾವಿರ ರೂ. ಮೀರದಂತೆ ಭತ್ತ ಕಟಾವು ಯಂತ್ರದ ಬಾಡಿಗೆಯನ್ನು ನಿಗಧಿ ಮಾಡಬೇಕು. ತಪ್ಪಿದ್ದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.

ಕೋವಿಡ್-19 ಸಮಸ್ಯೆ ಇರುವುದರಿಂದ ಅನ್ನದಾತರಿಗೆ ಅನುಕೂಲ ಮಾಡಿಕೊಡಲು ಭತ್ತ ಕಟಾವಿಗೆ ಪ್ರತಿ ಗಂಟೆಗೆ 1,900 ದರ ನಿಗದಿಪಡಿಸಿದೆ. ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಿದರೆ ಯಂತ್ರ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗಂಗಾವತಿ ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದ್ದಾರೆ.