News

ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದಿಸುವ ನೂತನ ಘಟಕ ಕಾರ್ಯಾರಂಭ

29 June, 2021 9:59 PM IST By:
ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಿರ್ಮಿಸಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಸಚಿವ ಬಿ.ಎ.ಬಸವರಾಜ ಲೋಕಾರ್ಪಣೆ ಮಾಡಿದರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಜರಿದ್ದರು.

ಕೊರೊನಾ ಎರಡನೇ ಅಲೆ ಸಾವಿರಾರು ಜನರ ಪ್ರಾಣ ತೆಗೆದುಕೊಂಡಿದೆ. ಈ ವೇಳೆ ಪ್ರಾಣವಾಯುವಾಗಿರುವ ಆಮ್ಲಜನಕದ ಕೊರತೆಯಿಂದಾಗಿಯೇ ಬಹಳಷ್ಟು ಮಂದಿ ನರಳಾಡಿ ಜೀವ ಬಿಟ್ಟಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ವಿವಿಧ ನಗರಗಳು, ಮಹಾನಗರಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿ, ಸಮಯಕ್ಕೆ ಸರಿಯಾಗಿ ಆಮ್ಲಜನಕ ಸೌಲಭ್ಯಗಳಿರುವ ಹಾಸಿಗೆಗಳು ದೊರೆಯದೆ ಸಾಕಷ್ಟು ಜನರು ಪ್ರಾಣ ತೊರೆದಿದ್ದಾರೆ. ಹಲವರು ಮನೆಯಿಂದ ಆಸ್ಪತ್ರೆಗಳಿಗೆ ತೆರಳುವ ಮಾರ್ಗ ಮಧ್ಯೆಯಯೇ ಕೊನೆಯ ಉಸಿರೆಳೆದಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಆಮ್ಲಜನಕದ ಕೊರತೆ ನೀಗಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನ ಆಮ್ಲಜನಕ ಉತ್ಪಾದನೆ ಘಟಕವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು ಲೋಕಾರ್ಪಣೆ ಮಾಡಿದ್ದಾರೆ. ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಘಟಕವು ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಭಾನುವಾರ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವ ಬಿ.ಎ.ಬಸವರಾಜ ಅವರು, ಸಂಸದ ಜಿ.ಎಂ. ಸಿದ್ದೇಶ್ವರ ಅವರೊಂದಿಗೆ ಚನ್ನಗಿರಿ ಪಟ್ಟಣಕ್ಕೆ ಭೇಟಿ ನಿಡಿ, ಅಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಮಂಜೂರು ಮಾಡಲಾದ 80 ಲಕ್ಷ ರೂ. ವೆಚ್ಚದ ನೂತನ ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರು ಹಾಗೂ ಸಂಸದರೊಂದಿಗೆ ಚನ್ನಗಿರಿ ಕ್ಷೇತ್ರದ ಶಾಸಕ ಹಾಗೂ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷರಾದ ಮಾಡಳ್ ವಿರೂಪಾಕ್ಷಪ್ಪ ಅವರು ಹಾಜರಿದ್ದರು.

ಘಟಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅವರು, ಸಂಸದರು ಹಾಗೂ ಚನ್ನಗಿರಿ ಶಾಸಕರ ಮುತುರ್ವಜಿಯಿಂದ ತಾಲೂಕಿನಲ್ಲಿ ಆಕ್ಸಿಜನ್ ಪೂರೈಸುವ ಘಟಕ ಆರಂಭವಾಗಿದೆ. ಈ ಘಟಕದ ಸಂಪೂರ್ಣ ಸದುಪಯೋಗ ಆಗಬೇಕು. ಈ ಘಟಕದ ನೆರವಿನಿಂದ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿತರಿಗೆ ಯಾವುದೇ ರೀತಿಯ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಯಾವೊಬ್ಬ ನಾಗರಿಕರೂ ಚಿಕಿತ್ಸೆಯಿಂದ ವಂಚಿತರಾಗಬಾರದು ಎಂದು ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಸೋಂಕಿತರಿಗೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಧಿಕಾರಿಗಳು ಒದಗಿಸಬೇಕು. ಆಕ್ಸಿಜನ್ ಘಟಕ ಸ್ಥಾಪನೆಗೆ ಎಲ್ಲಾ ರೀತಿಯ ಸಹಕಾರ ನೀಡಿರುವ ಚನ್ನಗಿರಿ ಶಾಸಕರು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಚನ್ನಗಿರಿ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷರಾದ ಮಾಡಳ್ ವಿರೂಪಾಕ್ಷಪ್ಪ ಅವರು ಮಾತನಾಡಿ, ‘ಕೊರೊನಾ ಎರಡನೇ ಅಲೆಯ ಆರಂಭಿಕ ಹಂತದಲ್ಲಿ ಅಷ್ಟಾಗಿ ಆಮ್ಲಜನಕದ ಸಮಸ್ಯೆ ಉದ್ಭವವಾಗಿರಲಿಲ್ಲ. ಆದರೆ, ಎರಡನೇ ಅಲೆ ಶುರುವಾದ ಒಂದೇ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಉಲ್ಬಣವಾಯಿತು. ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಪರದಾಡುವ ಪರಿಸ್ಥಿತಿ ಎದುರಾಯಿತು. ಇದನ್ನು ಕಂಡು ಕೆಎಸ್‌ಡಿಎಲ್ ಸಂಸ್ಥೆಯಯು ತನ್ನ ಸಾಮಾಜಿಕ ಜವಾಬ್ದಾರಿ ನಿಧಿ ಅಡಿಯಲ್ಲಿ 80 ಲಕ್ಷ ರೂ. ಅನುದಾನ ಬಳಸಿಕೊಂಡು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಸ್ಥಾಪನೆ ಮಾಡಲಾಗಿದೆ. ಈ ಘಟಕವು ಒಂದು ಗಂಟೆಗೆ 30 ಸಾವಿರ ಲೀಟರ್ ಹಾಗೂ ಪ್ರತಿ ಒಂದು ನಿಮಿಷಕ್ಕೆ 500 ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ’ ಎಂದರು.

ಈ ಸಂದರ್ಭದಲ್ಲಿ ಕೆಎಸ್‌ಡಿಎಲ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಎಚ್‌ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ತಾಲೂಕು ಅಧಿಕಾರಿಗಳು ಹಾಜರಿದ್ದರು.

ಮೃತರ ಪಟ್ಟಿ ಸಲ್ಲಿಸಿ

ಕೊರೊನಾ ಸಾಂಕ್ರಾಮಿಕ ಸೋಂಕಿನಿಂದ ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸುವ ಯೋಜನೆ ಜಾರಿಯಲ್ಲಿದ್ದು, ಈ ಸಂಬಂಧ ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಮರಣ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಹೆರು ಒಳಗೊಂಡಿರುವ ಪಟ್ಟಿಯನ್ನು ಸಿದ್ಧಪಡಿಸಿ ಶೀಘ್ರವೇ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚನ್ನಗಿರಿಯ ಮೌದ್ಗಲ್ ಆಂಜನೇಯ ಸ್ವಾಮಿ ಕಲ್ಯಾಣ ಮಂದಿರದಲ್ಲಿ ನಡೆದ ಕೋವಿಡ್-19 ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನಿಂದ ಮರಣ ಹೊಂದಿದ ಬಡ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಹೀಗಾಗಿ, ಕೊರೊನಾಗೆ ತುತ್ತಾಗಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಅಂಕಿ-ಅAಶಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಮೃತಪಟ್ಟಿರುವವರ ಹೆಸರು, ವಿಳಾಸ, ಕೋವಿಡ್ ಪಾಸಿಟೀವ್‌ಗೆ ಸಂಬಂಧಿಸಿದಂತೆ  ನೀಡುವ ರಾಜ್ಯ ಮಟ್ಟದ ಗುರುತು ಸಂಖ್ಯೆ ಸೇರಿ ಎಲ್ಲ ಅಗತ್ಯ ಮಾಹಿತಿಯ ಒಳಗೊಂಡ ವಿವರವಾದ ಪಟ್ಟಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಪಟ್ಟಿಯಲ್ಲಿ ಯಾವುದೇ ಅರ್ಹ ಕುಟುಂಬಗಳ ಹೆಸರು ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ತಾಕೀತು ಮಾಡಿದರು.