ನಮ್ಮಪ್ಪ ಸಾವಿರಾರು ಜನರಿಗೆ ಕುಕ್ಕರ್ ಹಾಗೂ ಐರನ್ ಬಾಕ್ಸ್ (ಇಸ್ತ್ರಿಪೆಟ್ಟಿಗೆ) ನೀಡಿದ್ದಾರೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಅವರೇ ಹೇಳಿದ್ದಾರೆ.
ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷರೂ ಆಗಿರುವ ಡಾ.ಯತೀಂದ್ರ ಸಿದ್ದರಾಮಯ್ಯ
ಅವರು ನೀಡಿರುವ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಚುನಾವಣಾ ಆಮಿಷವೊಡ್ಡಿದ್ದರು ಎನ್ನುವ ಸಂದೇಶವನ್ನು ಈ ಹೇಳಿಕೆ ನೀಡುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಾರಿಯ ವಿಧಾನಸಭೆ ಚುನಾವಣೆ ಸಮಯದಲ್ಲಿ ವರುಣ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದವರನ್ನು ಸಂಘಟಿಸಬೇಕು ಹಾಗೂ ಒಂದುಗೂಡಿಸಬೇಕು
ಎನ್ನುವ ಉದ್ದೇಶದಿಂದ ಸಾವಿರಾರು ಜನರನ್ನು ಸೇರಿಸಿ ಎಲ್ಲರಿಗೂ ಕುಕ್ಕರ್ ಮತ್ತು ಇಸ್ತ್ರೀಪೆಟ್ಟಿಗೆಗಳನ್ನು ನೀಡಿದ್ದೆವು.
ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷರಾದ ನಂಜಪ್ಪ ಅವರು ನನ್ನ ತಂದೆ ಸಿದ್ದರಾಮಯ್ಯ ಅವರಿಂದಲೇ ಅವುಗಳನ್ನು ಹಂಚಿಕೆ (ಕೊಡಿಸಿದ್ದರು) ಎಂದಿದ್ದಾರೆ.
ನಮಗೆಲ್ಲ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ನಂಜಪ್ಪ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ತಂದೆ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ನಿರತರಾಗಿದ್ದರೂ ಎರಡು ಮೂರು ಬಾರಿ ಭೇಟಿಯಾಗಿದ್ದರು.
ಅಲ್ಲದೇ ಹಲವು ಬಾರಿ ಸಮಯ ನಿಗದಿ ಮಾಡಿ ನಂತರ ರದ್ದಾಗಿದ್ದರೂ, ನನ್ನ ತಂದೆಯವರಿಂದಲೇ ಕೊಡಿಸಿದ್ದರು ಎಂದು ಹೇಳಿದ್ದಾರೆ.
ಅಲ್ಲದೇ ಸಮಾಜದ ಮತಗಳು ನಮಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತೆ ಮಾಡಿದ್ದಾರೆ. ಆದರೆ, ನಾನು ಆ ಕಾರ್ಯಕ್ರಮಕ್ಕೆ ಬರಲಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್!
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿಯು ಕಾಂಗ್ರೆಸ್‌ಅನ್ನು
ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಚುನಾವಣಾ ಆಯೋಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.