News

ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಬೆಂಗಳೂರಿಗೆ ಹೀನಾಯ ಸೋಲು

07 November, 2020 8:19 AM IST By:

ವಿರಾಟ್‌ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡದ ಚೊಚ್ಚಲ ಕಪ್‌ ಗೆಲ್ಲುವ ಕನಸು ಕನಸಾಗಿಯೇ ಉಳಿದಿದ್ದು  ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಸತತ 13ನೇ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು  ತಂಡದ ಪ್ರಶಸ್ತಿ ಜಯದ ಕನಸು ಭಗ್ನವಾಯಿತು.

ಐಪಿಎಲ್ 2020 ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳಿಂದ ಸೋತು ತನ್ನ ಅಭಿಯಾನವನ್ನು ಇಲ್ಲಿಗೆ ಅಂತ್ಯಗೊಳಿಸಿದೆ. ಆರಂಭದಲ್ಲಿ ಈ ಪ್ರಶಸ್ತಿ ನಮ್ಮದೇ ಎಂದು ಹೇಳಿಕೊಳ್ಳುತ್ತಿದ್ದ ಆರ್.ಸಿಬಿ  ತಂಡ ತನ್ನ ಕನಸು ಈಡೇರಿಸಿಕೊಳ್ಳಲಿಲ್ಲ.

ಲೀಗ್‌ ಹಂತದ ಕೊನೆಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಸೋತರೂ ನೆಟ್‌ ರನ್‌ರೇಟ್‌ ಲೆಕ್ಕಾಚಾರದಲ್ಲಿ ಪ್ಲೇ ಆಫ್ಸ್‌ ಟಿಕೆಟ್‌ ಪಡೆದುಕೊಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹೇಗಾದರೂ ಮಾಡಿ ಚೊಚ್ಚಲ ಪ್ರಶಸ್ತಿ ಗೆಲ್ಲಲ್ಲೇ ಬೇಕೆಂದುಕೊಂಡಿತ್ತು.

ಕಳಪೆ ಬ್ಯಾಟಿಂಗ್‌ನಿಂದಾಗಿ ದೊಡ್ಡ ಮೊತ್ತ ಗಳಿಸದ ವಿರಾಟ್ ಕೊಹ್ಲಿ ಬಳಗವು ಟೂರ್ನಿಯಿಂದ ಹೊರಬಿತ್ತು.

ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ರೀತಿ ಹೀನಾಯವಾಗಿ ಸೋಲಲು ಬ್ಯಾಟ್ಸ್‌ಮನ್‌ಗಳೇ ಕಾರಣ ಎಂದು ಪಂದ್ಯದ ಬಳಿಕ ಮಾತನಾಡಿದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಪಂದ್ಯ ಗೆಲ್ಲಲು ಬೇಕಿದ್ದ ಅಗತ್ಯದ ರನ್‌ ದಾಖಲಿಸುವಲ್ಲಿ ಬ್ಯಾಟಿಂಗ್‌ ವಿಭಾಗ ವಿಫಲವಾಯಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಟಾಸ್ ಗೆದ್ದ ಸನ್‌ರೈಸರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಫಲ ನೀಡಿತು. ಜೇಸನ್ ಹೋಲ್ಡರ್ (25ಕ್ಕೆ3) ಮತ್ತು ಟಿ ನಟರಾಜನ್ (33ಕ್ಕೆ2) ತಮ್ಮ ನಾಯಕನ ಯೋಜನೆಯನ್ನು ಸಫಲಗೊಳಿಸಿದರು.  ಆದರೆ ವಿರಾಟ್ ಕೊಹ್ಲಿಯ ತಂತ್ರಗಾರಿಕೆ ಕೈಕೊಟ್ಟಿತು.  ದೇವದತ್ತ ಪಡಿಕ್ಕಲ್ ಜೊತೆಗೆ ಇನಿಂಗ್ಸ್ ಆರಂಭಿಸಿದ ವಿರಾಟ್ ಅಚ್ಚರಿ ಮೂಡಿಸಿದರು. ಕೇವಲ  ಆರು ರನ್ ಗಳಿಸಿ ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಹೋಲ್ಡರ್‌ ಎಸೆತದಲ್ಲಿ ಔಟಾಗಿ ಅಭಿಮಾನಿಗಳಿಗೆ ಆಘಾತ ನೀಡಿದರು. ಆದರೆ ಟೂರ್ನಿಯಲ್ಲಿ ಮತ್ತೊಂದು ಅರ್ಧಶತಕ ಹೊಡೆದ ಎಬಿ ಡಿವಿಲಿಯರ್ಸ್‌ (56; 43ಎ) ತಂಡಕ್ಕೆ ಆಸರೆಯಾದರು. ಅದರಿಂದಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 131 ರನ್ ಗಳಿಸಿತು.

ಆರ್‌ಸಿಬಿ ಬೌಲರ್‌ಗಳ ಉತ್ತಮ ಬೌಲಿಂಗ್‌ನಿಂದಾಗಿ ಸನ್‌ರೈಸರ್ಸ್‌ ತಂಡವು ಕೊನೆಯ ಓವರ್‌ನವರೆಗೂ ಗೆಲುವಿಗಾಗಿ ಕಾಯಬೇಕಾಯಿತು.  ನ್ಯೂಜಿಲೆಂಡ್‌ನ ’ಕೂಲ್‌ ಕ್ಯಾಪ್ಟನ್‘ ಕೇನ್ ವಿಲಿಯಮ್ಸನ್ (ಔಟಾಗದೆ 50; 44ಎ, 2ಬೌಂ,2ಸಿ) ಮತ್ತು ವೆಸ್ಟ್‌ ಇಂಡೀಸ್‌ನ ’ಆಲ್‌ರೌಂಡರ್‌ ನಾಯಕ‘ ಹೋಲ್ಡರ್ (ಔಟಾಗದೆ 24; 20ಎ, 3ಬೌಂ) ತಂಡವನ್ನು ಗೆಲುವಿನ ದಡ ಸೇರಿಸಿ ಸಂಭ್ರಮಿಸಿದರು. ತಂಡವು 19.4 ಓವರ್‌ಗಳಲ್ಲಿ 4ಕ್ಕೆ132 ರನ್ಗಳಿಸಿತು. ಬೆಂಗಳೂರು ತಂಡದ ಮೊಹಮ್ಮದ್ ಸಿರಾಜ್ (28ಕ್ಕೆ2) ಮತ್ತು ಸ್ಪಿನ್ನರ್ ಗಳ ಬೌಲಿಂಗ್ ಸೊಗಸಾಗಿತ್ತು. ಆದರೆ, ದೊಡ್ಡ ಮೊತ್ತದ ಬಲವಿಲ್ಲದ ತಂಡವನ್ನು ಸೋಲಿನ ದವಡೆಯಿಂದ ತಪ್ಪಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವಾಗಿದ್ದು ನಾಯಕ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯ.  ಆ್ಯರನ್ ಫಿಂಚ್ (32; 30ಎ), ಎಬಿಡಿ ಮತ್ತು ಮೊಹಮ್ಮದ್ ಸಿರಾಜ್ (ಔಟಾಗದೆ 10) ಬಿಟ್ಟರೆ ಉಳಿದವರು. ಎರಡಂಕಿ ಮುಟ್ಟಲಿಲ್ಲ.  ಇನಿಂಗ್ಸ್‌ನ ಏಕೈಕ ಸಿಕ್ಸರ್ ಅನ್ನು ಫಿಂಚ್ ಗಳಿಸಿದರು.  ಎಬಿ ಮಾತ್ರ ದಿಟ್ಟತನದಿಂದ ಆಡಿದರು. 39 ಎಸೆತಗಳಲ್ಲಿ ಅವರು ಅರ್ಧಶತಕ ಪೂರೈಸಿದರು. 18ನೇ ಓವರ್‌ನಲ್ಲಿ ನಟರಾಜನ್ ಹಾಕಿದ ಯಾರ್ಕರ್‌, ಎಬಿಡಿ ಕಣ್ತಪ್ಪಿಸಿ  ಮಧ್ಯದ ಸ್ಪಂಪ್ ಎಗರಿಸಿತು. ಫೈನಲ್ ಪಂದ್ಯಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದ್ರಾಬಾದ್ ಸೆಣಸಾಟ ನಡೆಸಲಿದೆ.

ಸಂಕ್ಷಿಪ್ತ ಸ್ಕೋರ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131 (ಆರೊನ್‌ ಫಿಂಚ್‌ 32, ಎಬಿ ಡಿ'ವಿಲಿಯರ್ಸ್‌ 56; ಜೇಸನ್‌ ಹೋಲ್ಡರ್‌ 25ಕ್ಕೆ 3, ಟಿ ನಟರಾಜನ್‌ 33ಕ್ಕೆ 2, ಶಹಬಾಝ್‌ ನದೀಮ್ 30ಕ್ಕೆ 1).
ಸನ್‌ರೈಸರ್ಸ್‌ ಹೈದರಾಬಾದ್: 19.4 ಓವರ್‌ಗಳಲ್ಲಿ 4 ವಿಕೆಟ್‌ಗೆ 132 (ಡೇವಿಡ್‌ ವಾರ್ನರ್‌ 17, ಮನೀಶ್ ಪಾಂಡೆ 24, ಕೇನ್‌ ವಿಲಿಯಮ್ಸನ್ ಅಜೇಯ 50, ಜೇಸನ್‌ ಹೋಲ್ಡರ್‌ ಅಜೇಯ 24; ಮೊಹಮ್ಮದ್‌ ಸಿರಾಜ್ 28ಕ್ಕೆ 2, ಆಡಮ್‌ ಝಾಂಪ 12ಕ್ಕೆ 1, ಯುಜ್ವೇಂದ್ರ ಚಹಲ್ 24ಕ್ಕೆ 1).