News

18 ವರ್ಷದ ಬಳಿಕ ಚಿನ್ನದ ಗಣಿ ತೆರೆದ ಬಾಗಿಲು

26 October, 2018 4:30 PM IST By:

18 ವರ್ಷದ ಬಳಿಕ ಚಿನ್ನದ ಗಣಿ ತೆರೆದ ಬಾಗಿಲು

ಕಾರ್ಖಾನೆಯ ಯಂತ್ರಗಳು ತುಕ್ಕು ಹಿಡಿಯುವುದು ಸಾಮಾನ್ಯ. ಅದರಲ್ಲೂ ಮುಚ್ಚಿದ ಕಾರ್ಖಾನೆಯ ಯಂತ್ರಗಳು 17 ವರ್ಷಗಳ ನಂತರವೂ ತುಕ್ಕು ಹಿಡಿದಿಲ್ಲ ಎಂದರೆ ಅಚ್ಚರಿಯೇ ಸರಿ. ಕೇಂದ್ರ ಗಣಿ ಸಚಿವಾಲಯದ ಅಧಿಕಾರಿಗಳ ತಂಡವು ಕೋಲಾರದ  ಕಾರ್ಖಾನೆಗೆ ಗುರುವಾರ ಪರಿಶೀಲನೆ ನಡೆಸಿದ್ದು, ನಷ್ಟದ ಕಾರಣದಿಂದ 17 ವರ್ಷಗಳ ಹಿಂದೆ ಮುಚ್ಚಿದ್ದ ಕಾರ್ಖಾನೆ ಯಂತ್ರಗಳು ಇಂದಿಗೂ ಸುಸ್ಥಿತಿಯಲ್ಲಿರುವುದು ಕಂಡುಬಂತು.

ಕೇಂದ್ರ ಗಣಿ ಸಚಿವಾಲಯ ಕಾರ್ಯದರ್ಶಿ ಹಾಗೂ ಗಣಿ ಇಲಾಖೆಯ ನಿರ್ದೇಶಕರಾದ ವಿವೇಕಗುಪ್ತ, ಫಾರಿದ್‌ ಎಂ.ನಾಯಕ್‌ ಹಾಗೂ ಬಿಜಿಎಂಎಲ್‌ ಎಂಡಿ ಸಂತೋಷ ಶರ್ಮಾ ಮತ್ತು ಜಿಲ್ಲಾಧಿಕಾರಿ ಮಂಜುನಾಥ್‌ ಒಳಗೊಂಡ ಅಧಿಕಾರಿಗಳ ತಂಡ ಗುರುವಾರ ಚಿನ್ನದ ಗಣಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕಾರ್ಖಾನೆಯ ಯಂತ್ರೋಪಕರಣಗಳು ಹಾಗೂ ಕಾರ್ಖಾನೆ ವ್ಯಾಪ್ತಿಗೆ ಒಳಪಡುವ ಭೂಮಿಯ ವಿವರ ಮತ್ತು ಬಡಾವಣೆಗಳಲ್ಲಿ ವಾಸವಿರುವ ಕಾರ್ಮಿಕರ ಸ್ಥಿತಿಗತಿಗಳ ಮಾಹಿತಿ ಪಡೆದರು. ಗಣಿಗಾರಿಕೆ ನಡೆಯುತ್ತಿದ್ದ ವೇಳೆ ಚಿನ್ನದ ಅದಿರು ಸಂಗ್ರಹಿಸಲು ಕಾರ್ಮಿಕರು ಯಾವ ರೀತಿ ಗಣಿಯೊಳಗೆ ತೆರಳುತ್ತಿದ್ದರು ಎಂಬ ಮಾಹಿತಿ ಪಡೆದರು. ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ರೀತಿಯನ್ನು ನ್ಯಾಷನಲ್‌ ಇನ್ಸ್‌ಟ್ಯೂಟ್‌ ಆಫ್‌ ರಾಕ್‌ ಮೆಕಾನಿಕಲ್‌ನ ವಿಜ್ಞಾನಿ ರಾಜನ್‌ಬಾಬು ಹಾಗೂ ಬಿಜಿಎಂಎಲ್‌ ಅಧಿಕಾರಿ ಸೆಲ್ವಂ ಅಧಿಕಾರಿಗಳಿಗೆ ವಿವರಿಸಿದರು.

ಚಿಗುರಿದ ಆಸೆ:

ಚಿನ್ನದ ಗಣಿ ಪುನರಾರಂಭಿಸುವಂತೆ ಕಳೆದ 18 ವರ್ಷಗಳಿಂದ ಕಾರ್ಮಿಕರು ನ್ಯಾಯಾಂಗ ಹೋರಾಟ ನಡೆಸುತ್ತಿದ್ದಾರೆ. ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು. ಕಾರ್ಮಿಕರಿಗೆ ಬರಬೇಕಾಗಿರುವ ಗ್ರ್ಯಾಚ್ಯುಟಿ ಪಾವತಿಸಬೇಕು ಎಂಬ ಬೇಡಿಕೆ ನನೆಗುದಿಗೆ ಬಿದ್ದಿದೆ. ಈ ಹಂತದಲ್ಲಿ ಮೊದಲ ಬಾರಿಗೆ ಉನ್ನತ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿರುವುದು ಸ್ಥಳೀಯರಲ್ಲಿ ಹೊಸ ಆಸೆ ಮೂಡಲು ಕಾರಣವಾಗಿದೆ.

18 ವರ್ಷಗಳ ನಂತರ ತೆರೆದ ಬೀಗ

ಬಿಜಿಎಂಎಲ್‌ ಕಾರ್ಮಿಕರು ಆಳದ ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಗೇಜ್‌ ಯಂತ್ರದ ಕೊಠಡಿಗೆ ಬಾಗಿಲು ಹಾಕಿ 18 ವರ್ಷ ಕಳೆದಿತ್ತು. ಇದೇ ಮೊದಲ ಬಾರಿಗೆ ಗಣಿ ಸಚಿವಲಾಯದ ಕಾರ್ಯದರ್ಶಿ ಭೇಟಿ ನೀಡಿದ ಹಿನ್ನ್ನೆಲೆಯಲ್ಲಿ ಮುಚ್ಚಲಾಗಿದ್ದ ಬಾಗಿಲನ್ನು ತೆಗೆಯಲಾಯಿತು.

ಸ್ವರ್ಣ ಭವನಕ್ಕೆ ಭೇಟಿ

ಬಿಜಿಎಂಎಲ್‌ ಕಾರ್ಖಾನೆಯ ಸ್ವರ್ಣ ಭವನದಲ್ಲಿ ಅಧಿಕಾರಿಗಳು ಸಭೆ ನಡೆಸಿದರು. ಬಿಜಿಎಂಎಲ್‌ ವ್ಯಾಪ್ತಿಯಲ್ಲಿ ಲಭ್ಯವಿರುವ ಭೂಮಿ ವಿವರ ಹಾಗೂ ಬಿಜಿಎಂಎಲ್‌ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಕುಟುಂಬಗಳ ವಿವರ ಸಂಗ್ರಹಿಸಿದರು. ಕೆಜಿಎಫ್‌ ಗಣಿ ಕುರಿತ ವಸ್ತುಸ್ಥಿತಿ ವರದಿಯನ್ನು ಗಣಿ ಸಚಿವರಿಗೆ ನೀಡುವುದಾಗಿ ನಿಯೋಗ ತಿಳಿಸಿತು.