News

ಅಂಗಡಿ-ಮುಂಗಟ್ಟು ಬಂದ್, ಮೇ 4ರವರೆಗೆ ಕರ್ನಾಟಕದಲ್ಲಿ ಭಾಗಶಃ ಲಾಕ್‌ಡೌನ್‌

22 April, 2021 7:31 PM IST By:

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಂದು ಪರಿಶ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲವನ್ನೂ ಬಂದ್ ಮಾಡುವಂತೆ ತಿಳಿಸಿದೆ.

ಮೇ 4ರವರೆಗೆ ಕಠಿಣ ನಿರ್ಬಂಧ ಜಾರಿಗೊಳಿಸಿರುವ ಸರಕಾರ ಹೆಚ್ಚು ಕಡಿಮೆ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಿದೆ. ಮೇ 4ರವರೆಗೆ ಹಗಲು ಹೊತ್ತು ಸೇರಿದಂತೆ ಈ ನಿರ್ಬಂಧಗಳನ್ನು ಹೇರಲಾಗಿದೆ. ರಾಜ್ಯದಲ್ಲಿ ಅಗತ್ಯ ಸರಕುಗಳು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಮೊಬೈಲ್ ಶಾಪ್, ಟಿವಿ, ಎಲೆಕ್ಟ್ರಾನಿಕ್ ಶೋ ರೂಮ್, ಬ್ಯಾಂಗಲ್ಸ್ ಸ್ಟೋರ್, ಚಿನ್ನದ ಅಂಗಡಿ ಬುಕ್ ಶಾಪ್, ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಸ್ಟೋರ್, ಬಟ್ಟೆ ಅಂಗಡಿಗಳು ಸೇರಿ ಎಲ್ಲವನ್ನೂ ಬಂದ್ ಮಾಡಬೇಕಿದೆ. ಹೋಟೆಲ್ , ರೆಸ್ಟೋರೆಂಟ್, ಬಾರ್ ಗಳಲ್ಲಿ ಪಾರ್ಸಲ್ ತರಲಷ್ತೇ ಅವಕಾಶವಿದೆ.  ಆಟೋ, ಬಸ್, ಮೆಟ್ರೋ ಸೇವೆಗಳು ಲಭ್ಯವಾಗಲಿದೆ.

ಬ್ಯಾಂಕ್, ಎಟಿಎಂ, ಇನ್ಶ್ಯೂರೆನ್ಸ್ ಕಂಪನಿ, ಪೇಪರ್, ಟಿವಿ ಸೇರಿದಂತೆ ವಿವಿಧ ಮೀಡಿಯಾ ಸಂಸ್ಥೆಗಳು, ಇ-ಕಾಮರ್ಸ್ ಸೇವೆ, ಕಾಸಗಿ ಸೆಕ್ಯೂರಿಟಿ, ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಗಳಿಗೆ ಅನುಮತಿಸಲಾಗಿದೆ.

ಶಾಲೆ, ಕಾಲೇಜು, ತರಬೇತಿ ಸಂಸ್ಥೆಗಳು ಮುಚ್ಚಿರಲಿವೆ. ಕೇವಲ ಆನ್‌ಲೈನ್‌ ತರಗತಿಗಳಿಗೆ ಮಾತ್ರ ಅವಕಾಶವಿದೆ. ಸಿನಿಮಾ ಮಂದಿರ, ಜಿಮ್‌, ಸ್ಪಾ, ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆಗಳು, ಮನರಂಜನಾ ತಾಣಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಕ್ಲಬ್‌ಗಳು, ಬಾರ್, ಅಡಿಟೋರಿಯಂಗಳನ್ನು ತೆರೆಯುವಂತಿಲ್ಲ.

ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲವೇ ಇಲ್ಲ. ಸ್ಟೇಡಿಯಂ ಮತ್ತು ಮೈದಾನದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮತ್ತು ತರಬೇತಿಗೆ ತೆರೆಯಲು ಅವಕಾಶವಿದೆ. ಆದರೆ ವೀಕ್ಷಕರು ಇರುವಂತಿಲ್ಲ.

ಯಾವುದಕ್ಕೆಲ್ಲ ಅನುಮತಿ?

ನಿರ್ಮಾಣ ಚಟುವಟಿಕೆಗಳಿಗೆ, ದುರಸ್ತಿಗಳಿಗೆ ಅವಕಾಶ ಇದೆ. ಮುಂಗಾರು ಪೂರ್ವ ತಯಾರಿಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ. ಎಲ್ಲಾ ಕೈಗಾರಿಕೆಗಳಿಗೆ ಉತ್ಪಾದನಾ ಚಟುವಟಿಕೆ ಮುಂದುವರಿಸಲು ಅನುಮತಿ ಇದೆ.

ಇದು ಬಹಳ ಮುಖ್ಯ

ನ್ಯಾಯಬೆಲೆ ಅಂಗಡಿಗಳು, ದಿನಸಿ, ತರಕಾರಿ ಮತ್ತು ಹಣ್ಣು, ಹಾಲು ಮತ್ತು ಬೇಕರಿ ಉತ್ಪನ್ನಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವಿನ ಅಂಗಡಿ ತೆರೆಯಲು ಮಾತ್ರ ಅವಕಾಶವಿದೆ.

ಹೋಲ್‌ಸೇಲ್‌ ತರಕಾರಿ, ಹಣ್ಣು, ಹೂವು ಮಾರುಕಟ್ಟೆಗಳನ್ನು ತೆರೆಯಲು ಅವಕಾಶವಿದೆಯಾದರೂ, ತೆರೆದ ಪ್ರದೇಶ ಅಥವಾ ಮೈದಾನದಲ್ಲಿ ಮಾತ್ರ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಏಪ್ರಿಲ್‌ 23ರ ಒಳಗೆ ಈ ಮಾರುಕಟ್ಟೆ ಶಿಫ್ಟಿಂಗ್‌ ನಡೆಯಬೇಕು ಎಂದು ಹೇಳಲಾಗಿದೆ.

ಲಾಡ್ಜ್‌ನಲ್ಲಿರುವ ಉಪಹಾರ ಗೃಹಗಳಿಗೆ ಆಯಾ ಹೋಟೆಲ್‌ನಲ್ಲಿ ತಂಗಿರುವ ಅತಿಥಿಗಳಿಗೆ ಆಹಾರ ಪೂರೈಕೆ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಮದ್ಯದಂಗಡಿ, ರೆಸ್ಟೋರೆಂಟ್‌ಗಳಿಂದ ಮದ್ಯ, ಆಹಾರಗಳನ್ನು ಮನೆಗೆ ಕೊಂಡೊಯ್ಯಲು ಮಾತ್ರ ಅವಕಾಶವಿದೆ.