News

ಭದ್ರಾ ಜಲಾಶಯ ಭರ್ತಿಗೆ ಮೂರೇ ಅಡಿ ಬಾಕಿ; ನದಿ ಪಾತ್ರದ ಜನ ಎಚ್ಚರದಿಂದ ಇರಲು ಸೂಚನೆ

04 August, 2021 5:13 PM IST By:

ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿಗಳಷ್ಟೇ ಬಾಕಿ ಇದೆ. ಇದೇ ವೇಳೆ ಮಂಗಳವಾರದಿAದ (ಆಗಸ್ಟ್ 3) ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಆಲಾಶಯ ಭರ್ತಿಯಾದರೆ ನಾಲ್ಕೂ ಕ್ರಸ್ಟ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹರಿಬಿಡಲಾಗುತ್ತದೆ. ಆದ್ದರಿಂದ ಭದ್ರಾ ನದಿ ಪಾತ್ರದ ವ್ಯಾಪ್ತಿಗೆ ಬರುವ ಸಾರ್ವಜನಿಕರು, ನದಿಯ ಅಂಚಿನಲ್ಲಿ ಮನೆ, ಜಮೀನು ಹೊಂದಿರುವ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಪ್ರಾಧಿಕಾರವು ಸೂಚನೆ ನೀಡಿದೆ. 

ನದಿ ತೀರದಲ್ಲಿ ಕೃಷಿ ಭೂಮಿ ಹೊಂದಿರುವ ರೈತರು ಒಂದೆರಡು ದಿನ ಹೊಲದ ಕಡೆ ಹೋಗಬಾರದು. ಹಾಗೇ ನದಿ ದಡದ ಅಂಚಿನಲ್ಲಿ ಮನೆಗಳನ್ನು ಹೊಂದಿರುವ ನಿವಾಸಿಗಳು ಕೂಡಲೇ ಮನೆಗಳನ್ನು ಖಾಲಿ ಮಾಡಿಕೊಂಡು ಬೇರೊಂದು ಪ್ರದೇಶಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ತಿಳಿಸಲಾಗಿದೆ.

ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಭದ್ರಾ ನದಿ, ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅಭಯಾರಣ್ಯದ ಗಂಗಡಿಕಲ್ಲು ಬಳಿಯ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಉಗಮ ಸ್ಥಾನದಿಂದ ಪೂರ್ವಾಭಿಮುಖವಾಗಿ ಹರಿಯುವ ಕಾರಣ ಈ ನದಿ ಹುಟ್ಟುವ ಚಿಕ್ಕಮಗಳೂರು ಜಿಲ್ಲೆಯ ಜನತೆ ಇದರ ನೀರಿನಿಂದ ಅಷ್ಟೇನೂ ಪ್ರಯೋಜನ ಪಡೆಯುತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗಡಿ ಭಾಗದಲ್ಲಿರುವ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಬಳಿ ಭದ್ರಾ ನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲಾಗಿದೆ. ಚಿಕ್ಕಮಗಳೂರಿನ ಕೆಲ ಭಾಗ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ರೈತರು, ಸಾರ್ವಜನಿಕರು ಈ ಜಲಾಶಯದ ಫಲಾನುಭವಿಗಳಾಗಿದ್ದಾರೆ.

186 ಅಡಿ ಎತ್ತರವಿರುವ ಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಯಾವುದೇ ದೊಡ್ಡ ಜಲಾಶಯಕ್ಕೂ ಕಡಿಮೆ ಇಲ್ಲ. ಹಿನ್ನೀರು ಪ್ರದೇಶ ಅತ್ಯಂತ ವಿಶಾಲವಾಗಿರುವ ಕಾರಣ ಜಲಾಶಯದಲ್ಲಿ ಬರೋಬ್ಬರಿ 71.535 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಸುಮಾರು 4.20 ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವ ಭದ್ರಾ ಆಣೆಕಟ್ಟೆ ನಿರ್ಮಾಣವಾಗಿ 58 ವರ್ಷಗಳು ಕಳೆದಿದ್ದು, 39 ಬಾರಿ ಭರ್ತಿಯಾಗಿದೆ. ಈಗ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಈ ಬಾರಿಯೂ ಆಣೆಕಟ್ಟು ತುಂಬಲಿದೆ. ಅಲ್ಲದೆ ಜಲಾಶಯ ಭರ್ತಿಯಾಗುವುದರಿಂದ ಅಚ್ಚಕಟ್ಟು ಪ್ರದೇಶದ ರೈತರು ಬೇಸಿಗೆ ಬೆಳೆ ಬೆಳೆದುಕೊಳ್ಳಲು ನೀರು ಲಭ್ಯವಾಗಲಿದೆ. ಹೀಗಾಗಿ ಭದ್ರಾ ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ಭರ್ತಿಗೆ ಕೇವಲ 3 ಅಡಿ ಬಾಕಿ

ಈ ಹಿಂದಿನ ಹತ್ತಾರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭದ್ರೆಯ ಒಡಲು ಒಂದು ತಿಂಗಳು ಮುನ್ನವೇ ಭರ್ತಿಯಾಗುತ್ತಿದೆ. ಕಳೆದ ಬಾರಿಯೆಲ್ಲಾ ಜಲಾಶಯವು ಸೆಪ್ಟೆಂಬರ್ ಮೊದಲ ವಾರದಲ್ಲಿ ಭರ್ತಿಯಾಗಿದೆ. ಆದರೆ ಆಗಸ್ಟ್ ಮೊದಲ ವಾರದಲ್ಲೇ ತುಂಬುತ್ತಿರುವುದು ಇದೇ ಮೊದಲು. ಈಗಾಗಲೇ ಜಲಾಶಯದ ನೀರುನ ಮಟ್ಟವು 183.3 ಅಡಿ (ಆಗಸ್ಟ್ 4ರ ಬೆಳಗ್ಗೆ 6 ಗಂಟೆಯ ವರದಿ ಪ್ರಕಾರ) ತಲುಪಿದ್ದು, 8781 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಮಂಗಳವಾರ ರಾತ್ರಿ ಆರಂಭವಾದ ಮಳೆ, ಬುಧವಾರ ಸಂಜೆಯವರೆಗೂ ಮುಂದುವರಿದಿದ್ದು, ಗುರುವಾರ ಬೆಳಗ್ಗೆ ವೇಳೆಗೆ ಜಲಾಶಯ ಗರಿಷ್ಠ ಮಟ್ಟ ತಲುಪುವ ಸಾಧ್ಯತೆಗಳಿವೆ ಎಂದು ಪ್ರಾಧಿಕಾರದ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಭದ್ರಾ ಎಡದಂಡೆ ಹಾಗೂ ಬಲದಂಡೆಯ ನಾಲೆಗಳಿಗೆ ನೀರು ಹರಿಸಲಾಗಿದ್ದು, 3144 ಕ್ಯೂಸೆಕ್ ನೀರು ಜಲಾಶಯದಿಂದ ಹೊರಗೆ ಹರಿದು ಹೋಗತ್ತಿದೆ. ಜುಲೈ 26ರಂದು ಜಲಾಶಯದ ನೀರಿನ ಮಟ್ಟ 180 ಅಡಿ ಇತ್ತು. ಈ ವೇಳೆ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಆದರೆ ಅದೇ ದಿನ ಮಳೆಯ ಆರ್ಭಟ ಕಡಿಮೆಯಾದ ಪರಿಣಾಮ, ಒಳಹರಿವಿನ ಪ್ರಮಾಣ ಕಡಿಮೆ ಆಗಿತ್ತು. ಹೀಗಾಗಿ ಮೂರು ಅಡಿ ಭರ್ತಿಯಾಗಲು ಸುಮಾರು ಹತ್ತು ದಿನಗಳು ಬೇಕಾಯಿತು. ಪ್ರಸ್ತುತ ಕುದುರೆಮುಖ, ಶೃಂಗೇರಿ, ಕಳಸ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಒಳಹರಿವು ಕೂಡ ಹೆಚ್ಚಾಗಿದೆ.

ಆದ್ದರಿಂದ ಭದ್ರಾ ನದಿ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಕೋರಲಾಗಿದೆ. ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಭದ್ರಾ ಯೋಜನಾ ವೃತ್ತದ ಅಧೀಕ್ಷ ಅಭಿಯಂತರರು ತಿಳಿಸಿದ್ದಾರೆ.