ಹಾವೇರಿ ಜಿಲ್ಲೆ ಹನುಮನಮಟ್ಟಿಯಲ್ಲಿರುವ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಐಸಿಎಆರ್ ಕೃಷಿ ವಿಜ್ಞಾನ ಕಕೇಂದ್ರದ ವತಿಯಿಂದ ವಿಶ್ವ ಹಾಲು ದಿನದ ಅಂಗವಾಗಿ ಜೂ.೧ರಂದು ‘ಶುದ್ಧ ಹಾಲಿನ ಉತ್ಪಾದನೆ’ ಕುರಿತು ರೈತರಿಗೆ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಜೂ.1ರಂದು ಮಂಗಳವಾರ ಬೆಳಗ್ಗೆ 10.30ಕ್ಕೆ ಸರಿಯಾಗಿ ಗೂಗಲ್ ಮೀಟ್‌ನಲ್ಲಿ ಕಾರ್ಯಾಗಾರ ಆರಂಭವಾಗಲಿದೆ. ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಅಶೋಕ ಪಿ. ಅವರು ಪ್ರಸ್ತಾವನೆ ಮಂಡಿಸಲಿದ್ದು, ಭಾಗವಹಿಸಲಿರುವ ರೈತರು ಹಾಗೂ ಆಸಕ್ತರಿಗೆ ಕಾರ್ಯಾಗಾರದಲ್ಲಿ ತಜ್ಞರು ತಿಳಿಸಿಕೊಡಲಿರುವ ವಿಷಯಗಳ ಕುರಿತು ಮಾಹಿತಿ ನೀಡುವರು.
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನ ವಿಭಾಗದ ವಿಜ್ಞಾನಿಗಳಾಗಿರುವ ಡಾ. ಮಹೇಶ ಕಡಗಿ ಅವರು ಹಾಗೂ ಹಾವೇರಿ ಜಿಲ್ಲಾ ಪಶು ಪಾಲನಾ ಹಾಗೂ ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರಾಗಿರುವ ಡಾ. ರಾಜೇಶ್ ಕುಲೇರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ‘ಪ್ರಾಣಿಗಳ ಆರೋಗ್ಯ ಮತ್ತು ಉತ್ಪಾದಕತೆ’ ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಈ ಆನ್‌ಲೈನ್ ತರಬೇತಿ ಕಾರ್ಯಾಗಾರ ನಡೆಯಲಿದೆ.
ಇದೇ ವೇಳೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪ್ರಗತಿಪರ ರೈತ ಮಹಿಳೆ ಸಹನಾ ಹೊನ್ನಟ್ಟಿ ಅವರು ‘ಗಿರ್ ತಳಿ ಹಸುಗಳ ಹೈನುಗಾರಿಕೆ ಅನುಭವ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರು ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು https://meet.google.com/mib-nswp-abs ಈ ಲಿಂಕ್ ಮೇಲೆ ಒತ್ತುವ ಮೂಲಕ ಗೂಗಲ್ ಮೀಟ್‌ನಲ್ಲಿ ನಡೆಯುವ ಕಾರ್ಯಗಾರದಲ್ಲಿ ಭಾಗವಹಿಸಬಹುದು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ಅಶೋಕ ಅವರು ಮಾಹಿತಿ ನೀಡಿದ್ದಾರೆ. ಹೊಸದಾಗಿ ಹೈನುಗಾರಿಕೆ ಆರಂಭಿಸುವ ಉದ್ದೇಶ ಹೊಂದಿರುವ ಹಾಗೂ ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಉತ್ಸಾಹಿಗಳಿಗೆ ಈ ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ ದೊರೆಯಲಿದೆ.
ಹೆಚ್ಚಿನ ಮಾಹಿತಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಗ್ರಿ ವಾರ್ ರೂಮ್/ರೈತ ಚೇತನ ಉಚಿತ ಸಹಾಯವಾಣಿ ಸಂಖ್ಯೆ: 1800-425-1150 ಗೆ ಕರೆ ಮಾಡಬಹುದು.
ವಿಶ್ವ ಹಾಲು ದಿನ:
ಹಾಲು ಉತ್ಪಾದನೆ ಮತ್ತು ಹೈನುಗಾರಿಕೆಯ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ಸದುದ್ದೇಶದಿಂದ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು 2001ರಲ್ಲಿ ‘ವಿಶ್ವ ಹಾಲು ದಿನ’ದ ಆಚರಣೆಯನ್ನು ಆರಂಭಿಸಿದೆ. ವಿಶ್ವದಾದ್ಯಂತ ೧೫೦ ಕೋಟಿಗೂ ಅಧಿಕ ಮಂದಿ ಹೈನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ೫೦೦ ಕೋಟಿಗೂ ಅಧಿಕ ಮಂದಿ ಪ್ರತಿ ನಿತ್ಯ ವಿವಿಧ ರೂಪದಲ್ಲಿ ಹಾಲು ಸೇವಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆರೋಗ್ಯ ವೃದ್ಧಿ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಲು ಅತಿ ಮುಖ್ಯವಾದ ಪಾತ್ರ ವಹಿಸಲಿದ್ದು, ಇದನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸವನ್ನು ಜೂ.1ರಂದು ಜಗತ್ತಿನ ವಿವಿಧ ದೇಶಗಳಲ್ಲಿ ‘ವಿಶ್ವ ಹಾಲು ದಿನ’ ಆಚರಿಸುವ ಮೂಲಕ ಮಾಡಲಾಗುತ್ತಿದೆ.
2016ರಲ್ಲಿ ಭಾರತ ಸೇರಿ ಸುಮಾರು 40 ರಾಷ್ಟçಗಳಲ್ಲಿ ವಿಶ್ವ ಹಾಲು ದಿನ ಆಚರಿಸಲಾಗಿತ್ತು. ಪ್ರತಿ ವರ್ಷ ಮ್ಯಾರಥಾನ್ ಓಟ, ಬೀದಿ ನಾಟಕಗಳು, ಕಾರ್ಯಾಗಾರ, ಚರ್ಚಾಕೂಟ, ಸಂವಾದ, ಸ್ಪರ್ಧೆಗಳ ಆಯೋಜನೆ ಮೂಲಕ ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತಿದೆ.