News

ಚೈನಾ ಆಸ್ಟರ್ ಹೂವಿನ ಬೇಸಾಯ ಕ್ರಮಗಳು ಕುರಿತು ಆಗಸ್ಟ್ 12ರಂದು ಆನ್ಲೈನ್ ತರಬೇತಿ

11 August, 2021 8:14 PM IST By:

ಹೂವು ಬೆಳೆಯುವ ರೈತರ ಅನುಕೂಲಕ್ಕಾಗಿ ಶಿರಸಿಯ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಆಗಸ್ಟ್ 12ರಂದು ಬೆಳಗ್ಗೆ 11.30ಕ್ಕೆ ‘ಚೈನಾ ಆಸ್ಟರ್ (ಬಟನ್ಸ್) ಹೂವಿನ ಬೇಸಾಯ ಕ್ರಮಗಳು’ ಕುರಿತು ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಗುರುವಾರ ಬೆಳಗ್ಗೆ 11.30ಕ್ಕೆ ಆರಂಭವಾಗುವ ತರಬೇತಿ ಕಾರ್ಯಕ್ರಮವು ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದ್ದು, ಶಿರಸಿಯ ತೋಟಗಾರಿಕೆ ಮಹಾವಿದ್ಯಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಪ್ರೀತಮ್ ಎಸ್.ಪಿ. ಅವರು ವಿಷಯ ಮಂಡನೆ ಮಾಡಲಿದ್ದಾರೆ. ಈ ವೇಳೆ ಬಟನ್ಸ್ ಹೂವು ಬೆಳೆಯ ಬೇಸಾಯ ಕ್ರಮಗಳು, ಈ ಹೂವಿನ ಪ್ರಮುಖ ತಳಿಗಳು, ರಾಜ್ಯದಲ್ಲಿ ಈ ಹೂವಿಗೆ ಇರುವ ಮಾರುಕಟ್ಟೆ ಅವಕಾಶಗಳು ಹಾಗೂ ಬಟನ್ಸ್ ಹೂವುಗಳನ್ನು ಬೆಳೆಯುವುದರಿಂದ ರೈತರಿಗೆ ಆಗುವ ಲಾಭಗಳ ಕುರಿತು ಮಾಹಿತಿ ನೀಡುವರು.

ಇದೇ ವೇಳೆ ಶಿರಸಿಯ ತೋಟಗಾರಿಕೆ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಅಬ್ದುಲ್ ಕರೀಮ್ ಅವರು ಸಹ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಚೈನಾ ಆಸ್ಟರ್ ಅಥವಾ ಬಟನ್ಸ್ ಹೂವಿನ ಬೆಳೆಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ರೋಗಗಳು ಹಾಗೂ ಅವುಗಳ ನಿರ್ವಹಣೆ ಕುರಿತಂತೆ ರೈತ ಬಾಂಧವರಿಗೆ ಮಾಹಿತಿ ನೀಡುವರು.

ಗೂಗಲ್ ಮೀಟ್ ವೇದಿಕೆಯಲ್ಲಿ ಈ ತರಬೇತಿ ಕಾರ್ಯಾಗಾರವು ನಡೆಯಲಿದ್ದು, ಆಸಕ್ತ ರೈತರು https://meet.google.com/jhz-mzxs-etp ಈ ಲಿಂಕ್ ಬಳಸಿಕೊಂಡು ಲಾಗಿನ್ ಆಗುವ ಮೂಲಕ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಹೂವು ಬೆಳೆಗಾರರು, ಮುಂದೆ ಹೂವಿನ ಬೇಸಾಯ ಆರಂಭಿಸಬೇಕೆAದಿರುವ ರೈತರು ಹಾಗೂ ಈಗಾಗಲೇ ಚೈನಾ ಆಸ್ಟರ್ ಹೂವಿನ ಬೆಳೆ ಬೆಳೆಯುತ್ತಿರುವ ರೈತರು ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಹೂವಿನ ಬೇಸಾಯದ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 88673 72730, 94494 45958 ಸಂಪರ್ಕಿಸಲು ಕೋರಲಾಗಿದೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.

ಅತಿ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಹಾಗೂ ಉತ್ತಮ ಆದಾಯ ತಂದುಕೊಡುವ ಬೆಳೆಗಳಲ್ಲಿ ಚೈನಾ ಆಸ್ಟರ್ ಹೂವಿನ ಬೆಳೆ ಪ್ರಮುಖವಾದದ್ದು. ಒಂದು ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಬೆಳೆಯಲು ಹೆಚ್ಚೆಂದರೆ 25 ಸಾವಿರ ರೂ. ವೆಚ್ಚವಾಗಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಹೂವಿಗೆ 40-60 ರೂ. ಬೆಲೆಯಿದ್ದು, ಹಬ್ಬಗಳ ಸಂದರ್ಭದಲ್ಲಿ ಬೆಳೆ 100 ರೂ. ಮೀರುತ್ತದೆ.

ವರ್ಷವಿಡೀ ಬೆಳೆಯಬಹುದಾಗಿರುವ ಅಲ್ಪಾವಧಿಯ ಹೂವಿನ ಬೆಳೆ ಇದಾಗಿದ್ದು, ನಾಟಿ ಮಾಡಿದ ಮೂರೂವರೆಯಿಂದ ನಾಲ್ಕು ತಿಂಗಳಲ್ಲಿ ಹೂವುಗಳು ಕಟಾವಿಗೆ ಬರುತ್ತವೆ. ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಈ ಹೂವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹೂವು ಬೆಳೆಗಾರರ ಅನುಕೂಲಕ್ಕಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಹೆಚ್ಚು ಇಳುವರಿ ನೀಡುವ ಕಾಮಿನಿ, ಪೂರ್ಣಿಮಾ, ವೈಲೆಟ್‌ಕುಷನ್, ಶಶಾಂಕ್, ಅರ್ಕಾಆಧ್ಯ ಮತ್ತು ಅರ್ಕಾ ಅರ್ಚನ ಎಂಬ ತಳಿಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಫುಲೆಗಣೇಶ ವೈಟ್, ಫುಲೆಗಣೇಶ ಪಿಂಕ್, ಫುಲೆಗಣೇಶ ಪರ್ಪಲ್, ಫುಲೆಗಣೇಶ ವೈಲೆಟ್ ತಳಿಗಳನ್ನು ಸಹ ರೈತರು ಬೆಳೆಯುತ್ತಾರೆ.