News

ಬಿದಿರು ಬೇಸಾಯದ ತಾಂತ್ರಿಕತೆಗಳು ಕುರಿತು ಆಗಸ್ಟ್ 2ರಂದು ಆನ್ಲೈನ್ ತರಬೇತಿ

01 August, 2021 4:45 PM IST By:

ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹಾವೇರಿ ಜಿಲ್ಲೆ ಅನುಮನಮಟ್ಟಿಯಲ್ಲಿರುವ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ‘ಬಿದಿರು ಬೇಸಾಯದ ತಾಂತ್ರಿಕತೆಗಳು ಮತ್ತು ರೈತರ ಅನುಭವ’ ಕುರಿತು ಆಗಸ್ಟ್ 2ರಂದು ರೈತರಿಗಾಗಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಗೂಗಲ್ ಮೀಟ್ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮವು ಸೋಮವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಆರಂಭವಾಗಲಿದ್ದು, ಆಸಕ್ತ ರೈತ ಬಾಂಧವರು https://meet.google.com/mib-nswp-abs ಈ ಲಿಂಕ್ ಬಳಸಿಕೊಂಡು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

ಹಾವೇರಿಯ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಎಸ್.ಸುರೇಶ್ ಬಾಬು ಅವರು ಪ್ರಸ್ತಾವಿಕವಾಗಿ ಮಾತನಾಡಿ ಬಿದಿರು ಕೃಷಿಯ ಬಗ್ಗೆ ಮಾಹಿತಿ ನೀಡುವರು. ಇದೇ ವೇಳೆ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಕೃಷಿ ಅರಣ್ಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿರುವ ಡಾ. ರಾಮಕೃಷ್ಣ ಹೆಗಡೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಹಾನಗಲ್ ತಾಲೂಕಿನ ಮತ್ತಿಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕರಾಗಿರುವ ಜನಾರ್ಧನ ಹೆಗಡೆ ಅವರು ಸಹ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದು, ರೈತ ಬಾಂಧವರೊAದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಎಂದು ಹಾವೇರಿ ಜಿಲ್ಲೆ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳಾಗಿರುವ ಡಾ.ಅಶೋಕ ಪಿ. ಅವರು ಮಾಹಿತಿ ನೀಡಿದ್ದಾರೆ.

ಪೂರ್ಣ ಪ್ರಮಾಣದ ಬೆಳೆ

ಬಿದಿರನ್ನು ಒಂದು ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯಬಹುದು. ಇಲ್ಲವೇ ಜಮೀನಿನ ಸುತ್ತ ಬೇಲಿ ರೂಪದಲ್ಲೂ ಬೆಳೆಸಬಹುದು. ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯುವಾಗ ಪ್ರತಿ ಗಿಡದ ನಡುವೆ 6 ಅಡಿ ಹಾಗೂ ಪ್ರತಿ ಸಾಲಿನ ನಡುವೆ 10 ಅಡಿಗಳ ಅಂತರ ಕಾಯ್ದುಕೊಂಡು ಸಸಿ ನೆಡಬೇಕು. ಬಳಿಕ ಕಬ್ಬಿನ ಬೆಳೆಯಲ್ಲಿ ತೆಗೆಯುವಂತೆ ಸಾಲುಗಳ ನಡುವೆ ಟ್ರಂಚ್ ತೆಗೆದು, ನೀರು ಹರಿಸಬೇಕು. ಬೇಸಿಗೆಯಲ್ಲಿ ನೀರು ಗಿಡಗಳ ಬಳಿಯೇ ಉಳಿಯುವಂತೆ ಮಾಡಲು (ತೇವಾಂಶ ಹಿಡಿದಿಡಲು) ಹಸಿರೆ, ತೆಂಗು, ಅಡಕೆಯಗರಿಗಳನ್ನು ಟ್ರಂಚ್‌ಗೆ ಹಾಕಿ ಮಣ್ಣು ಮುಚ್ಚ, ಅದರ ಮೇಲೆ ನೀರು ಹಾಯಿಸಬೇಕು. ಬಿದಿರಿನ ನಡುವೆ ಬೇರಾವುದೇ ಬೆಳೆ ಬೆಳೆಯಬಾರದು.

ತಜ್ಞರು ಸಲಹೆ ಮಾಡಿದ ರೀತಿಯಲ್ಲೇ ನಿಗದಿತ ಅಂತರದಲ್ಲಿ ನಾಟಿ ಮಾ3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗಲಿದ್ದು, ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಪ್ರಸ್ತುತ ಮಾರುಕಟ್ಟೆ ದರದಂತೆ ಒಂದು ಟನ್ ಬಿದಿರಿನಿಂದ 5000 ರೂ. ಸಿಗಲಿದ್ದು, ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 80-90 ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಬೆಳೆದ ಬಿದಿರು ಮಾರಾಟಕ್ಕೆ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಪೀಠೋಪಕರಣಗಳಿಗೆ ಬಿದಿರು ಹೆಚ್ಚು ಬಳಕೆಯಾಗುವ ಕಾರಣ ನೀವು ಬೆಳೆಯುವ ವಿಷಯ ತಿಳಿದರೆ ಹಲವು ಕಂಪನಿಗಳು ಸ್ವತಃ ರೈತರ ಬಳಿ ತೆರಳಿ ಬಿದಿರು ಖರೀದಿಸುತ್ತವೆ.

ಕಾರ್ಯಾಗಾರದಲ್ಲಿ ಭಾಗವಹಿಸುವವರು ಮೊದಲು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಗೂಗಲ್ ಮೀಟ್ ಅಪ್ಲಿಕೇಷನ್ (ಆ್ಯಪ್) ಅನ್ನು ಡೌನ್‌ಲೋಡ್ ಮಾಡಿಕೊಂಡು, ಬಳಿಕ ಮೇಲೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ತರಬೇತಿಯಲ್ಲಿ ಭಾಗವಹಿಸಬಹುದು.

ಸೂಚನೆಗಳು: ಗೂಗಲ್ ಮೀಟ್ ವೇದಿಕೆಗೆ ಹಾಜರಾದ ಕೂಡಲೇ ಸದಸ್ಯರು ತಮ್ಮ ಆಡಿಯೋ ಮತ್ತು ವಿಡಿಯೋವನ್ನು ಮ್ಯೂಟ್ ಮಾಡಬೇಕು. ತರಬೇತಿ ಆರಂಭದಲ್ಲಿ ‘ಪ್ರಸೆಂಟ್ ನೌ’ ಮೇಲೆ ಕ್ಲಿಕ್ ಮಾಡದೆ, ‘ಆಸ್ಕ್ ಟು ಜಾಯಿನ್’ ಮೇಲೆ ಒತ್ತಬೇಕು.