News

ಈರುಳ್ಳಿ ಬೆಲೆ ಖರೀದಿಸುವಾಗಲೇ ಕಣ್ಣೀರಿಡುವಂತೆ ಮಾಡಿದೆ

01 October, 2020 4:07 PM IST By:

ಈರುಳ್ಳಿ ಬೆಲೆ ಮತ್ತೊಮ್ಮೆ ಜನಸಾಮಾನ್ಯರು ಕೊಳ್ಳುವಾಗಲೇ ಕಣ್ಣೀರಿಡುವಂತೆ ಮಾಡುತ್ತಿದೆ. ಕಳೆದ ಒಂದು ತಿಂಗಳಲ್ಲಿ ಮುಂಬೈ ಕರ್ನಾಟಕ ಭಾಗದಲ್ಲಿ ಸತತವಾಗಿ ಸುರಿದ ಮಳೆಯು ಹೊಲದಲ್ಲಿಯೇ ಈರುಳ್ಳಿ ಬೆಳೆ ಕೊಳೆಯುಂತೆ ಮಾಡಿತು. ಇದರಿಂದಾಗಿ ಎಪಿಎಂಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿದ್ದರ ಪರಿಣಾಮವಾಗಿ  ಈರುಳ್ಳಿ ಬೆಲೆ 50 ರ ಗಡಿ ದಾಟಿದೆ.

 ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಮಹಾರಾಷ್ಟ್ರದಿಂದ ಬರುತ್ತಿದ್ದ ಈರುಳ್ಳಿ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ. ಹದಿನೈದು ದಿನಗಳ ಹಿಂದಷ್ಟೇ ಪ್ರತಿ ಕೆಜಿಗೆ 20ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ, ಈಗ ಪ್ರತಿ ಕೆಜಿಗೆ 50 ರಿಂದ 55 ಕ್ಕೆ ಮಾರಾಟವಾಗುತ್ತಿದೆ.  ಎಪಿಎಂಸಿ ಮಾರುಕಟ್ಟೆಯಲ್ಲಿಯೂ ಕ್ವಿಂಟಲ್‌ ಈರುಳ್ಳಿ ಬೆಲೆ  3,200 ರಿಂದ 5,000ರವರೆಗೆ ಇದೆ.

ತೇವಾಂಶ ಹೆಚ್ಚಾಗಿರುವುದರಿಂದಸಂರಕ್ಷಿಸಿದ್ದ ಈರುಳ್ಳಿಯೂ ಹಾಳಾಗು ತ್ತಿದೆ. ಹೊಲದಲ್ಲಿರುವ ಬೆಳೆಯೂ ನೀರಿನಲ್ಲಿಯೇ ಕೊಳೆಯುತ್ತಿದೆ. ಹಾಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವರ್ಷ 100 ರ ಗಡಿ ದಾಟಿದ ಈರುಳ್ಳಿ ಬೆಲೆ ಈ ವರ್ಷವೂ ಸಹ 100 ಸಮೀಪ ಹೋಗುವ ಆತಂಕ ಕಾಡುತ್ತಿದೆ.

ಕಳೆದ ವರ್ಷ ಬರ ಹಾಗೂ ನೆರೆಯಿಂದಾಗಿ ಉಳ್ಳಾಗಡ್ಡಿ ಬೆಳೆ ನೆಲ ಕಚ್ಚಿದ್ದರಿಂದ ಆವಕ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿತ್ತು. ಇದರ ಪರಿಣಾಮವಾಗಿ ಕಳೆದ ವರ್ಷ 100 ರ ಗಡಿ ದಾಟಿತ್ತು. ಕಳೆದ ಒಂದು ತಿಂಗಳಲ್ಲಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾಳಾಗಿದೆ. ಹಾಗಾಗಿ ಸಹಜವಾಗಿ ಈ ವರ್ಷ ಮತ್ತೆ ಈರುಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.

ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾಗಿರುವುದೇ ಈರುಳ್ಳಿ ದರ ಗಗನಕ್ಕೇರಲು ಕಾರಣ ಎಂದು ಹೇಳಲಾಗುತ್ತಿದೆ.