ಈರುಳ್ಳಿ ದರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇದೀಗ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋವೊಂದಕ್ಕೆ 60-70ಕ್ಕೆ ಮಾರಾಟವಾಗುತ್ತಿದೆ.
ಕಳೆದ ಕೆಲ ದಿನಗಳಿಂದ ಈರುಳ್ಳಿ ಬೆಲೆ ಏರುತ್ತಿದ್ದು, ಗ್ರಾಹಕರಲ್ಲಿ ಕಣ್ಣೀರು ತರಿಸುತ್ತಿದೆ. ವಾರದ ಹಿಂದಷ್ಟೇ ಕೆ.ಜಿ. 40-45 ರೂಪಾಯಿ ಆಸುಪಾಸಿನಲ್ಲಿದ್ದ ಈರುಳ್ಳಿ ಬೆಲೆ ಈಗ 60-70 ರೂಪಾಯಿಗೆ ಮಾರಾಟವಾಗುತ್ತದೆ. ಆರಂಭದಲ್ಲಿ ಲಾಕ್‌ಡೌನ್ ಪರಿಣಾಮವಾಗಿ ವಸ್ತುಗಳ ಸಾಗಾಟಕ್ಕೆ ತೊಂದರೆ ಎದುರಾಯಿತು. ನಂತರ ಉತ್ಪಾದನೆಯಲ್ಲಿ ವ್ಯತ್ಯಾಸ ಆಯಿತು. ಈಗ ಸುರಿದ ಧಾರಾಕಾರ ಮಳೆಯಿಂದ ಬೆಳೆದ ಈರುಳ್ಳಿ ಹಾಳಾದವು. ಇವೆಲ್ಲದರ ಪರಿಣಾಮ ಎಂಬಂತೆ ನಿತ್ಯ ಬಳಸುವ ಈರುಳ್ಳಿ ಬೆಲೆ ಹೆಚ್ಚಳವಾಗಿದೆ. ಹಬ್ಬದ ಪರಿಣಾಮ ಈರುಳ್ಳಿ ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಇದರೊಂದಿಗೆ ಹೂವಿನ ಬೆಲೆಯಲ್ಲಿಯೂ ಏರಿಕೆಯಾಗಿದ್ದರಿಂದ ಗ್ರಾಹಕ ವಸ್ತುಗಳನ್ನು ಖರೀದಿಸಲು ಯೋಚಿಸುವಂತಾಗಿದೆ. ಮುಂದೆ ಈರುಳ್ಳಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮುಂಬೈ ಕರ್ನಾಟಕದ ಧಾರವಾಡ, ಬಾಗಲಕೋಟೆ, ಗದಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಜೊತೆಗೆ ಮಹಾರಾಷ್ಟ್ರದಿಂದಲೂ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಆವಕವಾಗುತ್ತದೆ. ಲಾಕ್‌ಡೌನ್ ಹಾಗೂ ನಂತರದ ದಿನಗಳಲ್ಲಿ ಸರಕು ಸಾಗಣೆ ವ್ಯವಸ್ಥೆಯಲ್ಲಾದ ವ್ಯತ್ಯಾಸದ ಪರಿಣಾಮವಾಗಿ ಮಹಾರಾಷ್ಟ್ರದಿಂದ ಆವಕ ಕಡಿಮೆಯಾಗಿದೆ.
ಕಳೆದ ನಾಲ್ಕು ತಿಂಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿಯೂ ಈರುಳ್ಳಿ ಬೆಳೆ ನೀರು ಪಾಲಾಗಿವೆ. ಹೀಗಾಗಿ, ಈರುಳ್ಳಿ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 5,000 ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 60 ರಿಂದ 70ಕ್ಕೆ ಮಾರಾಟವಾಗುತ್ತಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆಜಿಗೆ 40-50 ರುಪಾಯಿಗೆ ಆರಂಭಗೊಂಡು ದೊಡ್ಡ ಈರುಳ್ಳಿಯ ದರ 70-80 ರೂಪಾಯಿಗೆ ಏರಿಕೆಗೆಯಾಗಿದೆ. ಈ ಬಾರಿ ವಿವಿಧೆಡೆ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತರಕಾರಿ ಬೆಳೆಗೆ ಹಾನಿಯಾಗಿದೆ. ಈರುಳ್ಳಿ ಬೆಳೆಗೆ ಅತೀವೃಷ್ಠಿ ಸಾಕಷ್ಟು ಹಾನಿಯಾಗಿರುವುದು ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವಕ್ಕೆ ಮತ್ತು ತೀವ್ರ ಬೆಲೆ ಏರಿಕೆಗೆ ಕಾರಣವೆನ್ನಲಾಗುತ್ತಿದೆ.