ಈರುಳ್ಳಿ ಬೆಲೆ ಏರಿಕೆಯಿಂದಾಗಿ ಈರುಳ್ಳಿ ಬಳಕೆ ಪ್ರಮಾಣ ಕಡಿಮೆಯಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಹೋಟೆಲ್, ಡಾಬಾ, ರೆಸ್ಟೋರೆಂಟ್‌ಗಳಲ್ಲೂ ಈರುಳ್ಳಿ ಬಳಕೆ ನಿಗದಿ ಪ್ರಮಾಣಕ್ಕಿಂತ ಕಡಿಮೆ ಮಾಡಲಾಗಿದೆ. ವಿಪರ್ಯಾಸ ಎಂದರೆ, ಬೆಂಗಳೂರಿನ ಹಲವು ಹೋಟೆಲ್‌ಗಳ ಮೆನುವಿನಲ್ಲಿ ಈರುಳ್ಳಿ ದೋಸೆ ನಾಪತ್ತೆಯಾಗಿದೆ.
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ಬೆಲೆ 120 ರೂ. ಆಗಿದೆ. ರಾಜ್ಯದ ವಿವಿಧ ಜಿಲ್ಲೆ, ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಬೆಲೆ 100 ರೂ. ಗಡಿ ದಾಟಿದೆ. ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಲೆ ಏರಿಕೆಯಿಂದಾಗಿ ಈರುಳ್ಳಿ ಬಳಕೆ ಕಡಿಮೆಯಾಗಿದೆ. ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆಗೆ ಇದ್ದ ಬೇಡಿಕೆ ತೀರ ಕಡಿಮೆಯಾಗಿದೆ. ಹೀಗಾಗಿ ಮೆನುವಿನಿಂದಲೇ ಈರುಳ್ಳಿ ದೋಸೆ ಹೆಸರು ತೆಗೆಯಲಾಗಿದೆ. ಇನ್ನು ಕೆಲವು ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ ದೊರೆಯುತ್ತಿದೆ.
ಸಾಮಾನ್ಯ ದಿನಗಳಲ್ಲಿ 50 ರಿಂದ 60 ರೂ.ಗಳಿಗೆ ಈರುಳ್ಳಿ ದೋಸೆ ಸಿಗುತ್ತಿತ್ತು. ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ 75 ರಿಂದ 80 ರೂ. ಇತ್ತು. ಆದರೆ ಈಗ ಒಂದು ಈರುಳ್ಳಿ ದೋಸೆ ಬೆಲೆ 100 ರಿಂದ 150 ರೂ. ಇದೆ. ಹೀಗಾಗಿ ಹಲವು ಹೋಟೆಲ್‌ಗಳ ಮೆನುವಿನಲ್ಲಿ ಈರುಳ್ಳಿ ದೋಸೆ ಕಾಣೆಯಾಗಿದೆ.
ಬೆಂಗಳೂರಿನ ಪ್ರಮುಖ ಹೋಟೆಲ್‌ಗಳಲ್ಲಿ ಒಂದು ಈರುಳ್ಳಿ ದೋಸೆ ಬೆಲೆ 100 ರೂ. ಆಗಿದೆ. ಕೆಲವು ಹೋಟೆಲ್‌ಗಳಲ್ಲಿ ಗುರುವಾರ 150 ರೂ. ದರವಿತ್ತು. ಆನ್‌ಲೈನ್‌ನಲ್ಲಿ ಸ್ವಿಗ್ಗಿ, ಝೊಮೆಟೋ ಸೇರಿದಂತೆ ವಿವಿಧ ಅಪ್ಲಿಕೇಶನ್‌ಗಳಲ್ಲಿ ಈರುಳ್ಳಿ ದೋಸೆ ಸಿಗುತ್ತಿದೆ. ಅಲ್ಲಿಯೂ 100 ರೂ. ಗಿಂತ ಕಡಿಮೆ ಬೆಲೆಗೆ ಈರುಳ್ಳಿ ದೋಸೆ ಸಿಗುವುದಿಲ್ಲ.
ಮೊದಲು ಯಾವುದೆ ವಸ್ತು ಆರ್ಡರ್ ಮಾಡಿದರೂ, ಈರುಳ್ಳಿ ಹೆಚ್ಚಿಗೆ ಕೇಳುತ್ತಿದ್ದರು. ಈಗ ಆ ಬೇಡಿಕೆಯೂ ಮಾಡುವ ಹಾಗಿಲ್ಲ. 2019ರ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ಈರುಳ್ಳಿ ಬೆಲೆ 150 ರಿಂದ 180 ರೂ. ತಲುಪಿತ್ತು. ಆ ಸಂದರ್ಭದಲ್ಲಿ ಬಹುತೇಕ ಕಡೆಗಳಲ್ಲಿ ಗೋಲ್‌ಗೊಪ್ಪ, ಪಾನಿಪುರಿಗೆ ಈರುಳ್ಳಿ ಬದಲು ಎಲೆಕೋಸು ನೀಡಲಾಗುತ್ತಿತ್ತು. ಬಳಿಕ ಈರುಳ್ಳಿ ಪೂರೈಕೆ ಹೆಚ್ಚಾಗಿ ಬೆಲೆ ಕಡಿಮೆಯಾಗಿ, ಮೊದಲಿನ ಸ್ಥಿತಿಗೆ ಬಂದಿತ್ತು. ಈಗ ಭಾರೀ ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕಡಿಮೆಯಾಗಿದ್ದು, ಮತ್ತೆ ಬೆಲೆ ಏರಿಕೆಯಾಗಿ, ಈರುಳ್ಳಿ ಬಳಕೆಯ ಪ್ರಮಾಣ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಕೆಜಿ ಈರುಳ್ಳಿ ಬೆಲೆ 120ಕ್ಕೆ ಏರಿಕೆಯಾಗಿದೆ. ಸಣ್ಣ ಈರುಳ್ಳಿ ಬೆಲೆ ಸಹ ಏರಿಕೆಯಾಗಿದ್ದು, ಜನರು ಖರೀದಿ ಮಾಡಲು ಆಲೋಚನೆ ಮಾಡುವಂತಾಗಿದೆ. ಈರುಳ್ಳಿ ಇಲ್ಲದಿದ್ದರೆ ಖಾದ್ಯಗಳು ರುಚಿಸುವುದಿಲ್ಲ, ಆದರೆ, ಹೆಚ್ಚು ದರ ಕೊಟ್ಟು ಖರೀದಿ ಮಾಡುವಂತಿಲ್ಲ ಎಂಬ ಸಂಕಷ್ಟದಲ್ಲಿ ಜನರು ಸಿಲುಕಿದ್ದಾರೆ.
ಲೇಖಕರು: ಕುಸುಮಾ ಎಲ್. ಆಚಾರ್ಯ