News

ಮಳೆಯಿಂದ ಈರುಳ್ಳಿಗೆ ಕೊಳೆ ರೋಗ; ಸಂಕಷ್ಟಕ್ಕೆ ಸಿಲುಕಿದ ಈರುಳ್ಳಿ ಬೆಳೆಗಾರರು

25 August, 2020 9:55 AM IST By:

ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ಸೇರಿದಂತೆ ಅನೇಕ ಕಡೆ ನದಿಗಳು ಉಕ್ಕಿ ಹರಿದ ಪರಿಣಾಮ ಈರುಳ್ಳಿ ಬೆಳೆ (Onion crop) ನೀರಿನಲ್ಲಿ ಕೊಳೆತು  ನಾಶವಾಗಿದೆ. ಇದರಿಂದಾಗಿ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ದಶಕಗಳಿಂದ ಮಳೆಯಿಲ್ಲದೇ ಸತತ ಬರಗಾಲಕ್ಕೆ ತುತ್ತಾಗಿ ಬರದ ಹಣೆಪಟ್ಟಿ ಕಟ್ಟಿಕೊಂಡಿದೆ.  ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಆದರೆ ಮಳೆ ಬಂದ ಸಂತಸದಲ್ಲಿದ್ದ  ಈರುಳ್ಳಿ ಬೆಳೆದ ರೈತರು, ಮಳೆ ಹೆಚ್ಚಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆ(Heavy rain) ಯಿಂದ ಈರುಳ್ಳಿ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ.

ಹೆಚ್ಚು ಈರುಳ್ಳಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಂತರ ಮಳೆಯಿಂದಾಗಿ ಬರೆ ಎಳೆದಂತಾಗಿದೆ. ಪ್ರತಿ ವರ್ಷ ಮಳೆ ಇಲ್ಲದೆ ಬೋರ್​ವೆಲ್​​ಗಳ ಆಶ್ರಯದಲ್ಲಿ ಈರುಳ್ಳಿ ಬೆಳೆಯುತ್ತಿದ್ದ ಬಹುತೇಕ ರೈತರು, ಈ ಬಾರಿಯ ನಷ್ಟಕ್ಕೆ ತತ್ತರಿಸಿದ್ದು, ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ಅಲ್ಲದೆ ಕೊಳೆತ ರೋಗದಿಂದ ಹಾಕಿದ ಬಂಡವಾಳ ವಾಪಸ್ ಬರುತ್ತದೋ ಇಲ್ಲವೋ ಎನ್ನುವ ಯೋಚನೆಯಿಂದ  ಸಂಕಷ್ಟ ಎದುರಿಸುತ್ತಿದ್ದಾರೆ.  ಇನ್ನೇನು ಬೆಳೆ ಕೈ ಸೇರಬೇಕು ಅನ್ನುವಷ್ಟರಲ್ಲಿ, ಸುರಿಯುತ್ತಿರುವ ಮಳೆಯಿಂದ ನಿಜಕ್ಕೂ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ  ಈರುಳ್ಳಿ ಬೆಳೆ ಈಗ ಗೆಡ್ಡೆ ಕಟ್ಟುವ ಸಂದರ್ಭದಲ್ಲಿ  ಹೆಚ್ಚು ಮಳೆ ಬಂದಿದ್ದು 75ರಿಂದ80 % ನಷ್ಟು ಬೆಳೆ ಕೊಳೆತು (crop loss)ಹೋಗುತ್ತಿದೆ.

ಅಕಾಲಿಕ ಸುರಿದ ಕುಂಭದ್ರೋಣ ಮಳೆಯಿಂದ ಪ್ರವಾಹ ಉಂಟಾಗಿ ಈ ಜಿಲ್ಲೆಗಳಲ್ಲಿರುವ ಸುಮಾರು ೧ ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆ ಜಲಾವೃತಗೊಂಡು ನಾಶವಾಗಿದೆ. ಹಾಗೆಯೇ ಅಳಿದುಳಿದು ಉಳಿದಿದ್ದ ಬೆಳೆಗಳಿಗೆ ರೋಗ ತಗುಲುತ್ತಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಪ್ರಸ್ತುತ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್ ಭಾಗಗಳಲ್ಲಿಯೂ ಕೂಡ ವರುಣನ ಆರ್ಭಟ ಹೆಚ್ಚಾಗಿದ್ದು, ಅಲ್ಲಿಯೂ ಬೆಳೆ ನಾಶವಾಗಿದೆ.