News

ಒಂದು ದೇಶ, ಒಂದು ಮಾರುಕಟ್ಟೆ:ರೈತರಿಗೆ ಮುಕ್ತವಾಗಿ ಬೆಳೆ ಮಾರಾಟಕ್ಕೆ ಅವಕಾಶ

18 June, 2020 12:56 PM IST By:

ಕೊರೋನಾ ಲಾಕ್ಡೌನ್¬ನಿಂದಾಗಿ ರೈತರು ಕಂಗಾಲಾಗಿದ್ದಾರೆ. ಇಂತಹ ಸ್ಥಿತಿಯಿಂದ ರೈತರನ್ನು ಮೇಲೆತ್ತುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಹೊಸ ಕಾನೂನುಗಳನ್ನು, ನಿಯಮಗಳನ್ನು ಜಾರಿಗೊಳಿಸುತ್ತಲೇ ಬಂದಿದೆ.

ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಂಡಿಗಳಲ್ಲಿ ತನ್ನ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ಯಾವುದೇ ರೈತ ಇನ್ನು ಹತಾಶನಾಗಬೇಕಿಲ್ಲ. ಹೋದಷ್ಟಕ್ಕೆ ಹೋಗಲಿ ಎಂಬ ಅನಿವಾರ್ಯಕ್ಕೆಸಿಲುಕಿ ತನ್ನ ಬೆಳೆಯನ್ನು ಮಾರಬೇಕಿಲ್ಲ. ದೇಶದ ಯಾವ ಭಾಗದಲ್ಲಿ ತನ್ನ ಬೆಳೆಗೆ ಬೇಡಿಕೆ ಇದೆಯೋ ಅಲ್ಲಿಗೆ ನೇರವಾಗಿ ತನ್ನ ಬೆಳೆಯನ್ನು ಕೊಂಡೊಯ್ದು ಮಾರಾಟ ಮಾಡಬಹುದು. ರೈತರಿಗೆ ಈ ಮಟ್ಟದ ಸ್ವಾತಂತ್ರ್ಯವೊಂದನ್ನು ನೀಡುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಂಪುಟ ಸಭೆಯ ಬಳಿಕ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಗತ್ಯ ಸಾಮಗ್ರಿಗಳ ಕಾಯ್ದೆ ವ್ಯಾಪ್ತಿಯಿಂದ ಕಾಳುಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿಯನ್ನು ಹೊರಗಿಡಲು ನಿರ್ಧರಿಸಲಾಗಿದೆ ಎಂದರು.

ಒಂದು ರಾಷ್ಟ್ರ , ಒಂದು ಮಾರುಕಟ್ಟೆ:

ರೈತರು ರಾಜ್ಯಗಳ ಗಡಿಯ ಹಂಗಿಲ್ಲದೆ ದೇಶದೊಳಗಿನ ಯಾವುದೇ ಪ್ರಾಂತ್ಯಗಳಿಗೆ ಕೊಂಡೊಯ್ದು ಮಾರಾಟ ಮಾಡಬಹುದಾಗಿದೆ. ಸುಮಾರು 50 ವರ್ಷಗಳಿಂದ ರೈತರು ಇಂಥದ್ದೊಂದು ಸ್ವಾತಂತ್ರ್ಯವನ್ನು ಕೇಳುತ್ತಿದ್ದರು ಅದನ್ನು ಈಗ ನೆರವೇರಿಸಲಾಗುತ್ತಿದೆ. ದೇಶವಿನ್ನು ರೈತರ ಪಾಲಿಗೆ “ಒಂದು ರಾಷ್ಟ್ರ, ಒಂದು ಮಾರುಕಟ್ಟೆ’ಯಾಗಿ ಬದಲಾಗಲಿದೆ ಎಂದು ಹೇಳಿದ್ದಾರೆ.

ಎಣ್ಣೆ, ಎಣ್ಣೆಕಾಳು, ಮಸೂರ, ಈರುಳ್ಳಿ, ಆಲೂಗಡ್ಡೆ  ಅಂತಹ ವಸ್ತುಗಳನ್ನು ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈಗ ರೈತನು ಯೋಜನೆಯ ಪ್ರಕಾರ ಅವುಗಳನ್ನು ಸಂಗ್ರಹಿಸಿ ಮಾರಾಟ ಮಾಡಬಹುದು ಎಂದು ತಿಳಿಸಿದರು.

ದೇಶದ 6900 ಎಪಿಎಂಸಿಗಳಲ್ಲಿ ಮಾರಬಹುದು:

ಪ್ರಸ್ತುತ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದೇಶಾದ್ಯಂತ ಹರಡಿರುವ 6,900 ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು) ಮಂಡಿಗಳಲ್ಲಿ ಮಾರಾಟ ಮಾಡಲು ಅವಕಾಶವಿದೆ.