ರಾಜ್ಯದಲ್ಲಿ ಆಹಾರ ಸಂಸ್ಕರಿಸುವ ಸಣ್ಣ ಉದ್ದಿಮೆಗಳ ನಡುವೆ ಸ್ಪರ್ಧೆ ಹೆಚ್ಚಿಸುವ ಹಿನ್ನೆಲೆಯಲ್ಲಿ ರೈತರಿಗೆ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ತರಬೇತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರು ಹೇಳಿದ್ದಾರೆ.
ಈ ಕುರಿತು ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆಯ (ಸಿಎಫ್‌ಟಿಆರ್‌ಐ) ಮುಖ್ಯಸ್ಥರ ಜೊತೆ ಶನಿವಾರ ಚರ್ಚಿಸಿದ ಬಳಿಕ ಮಾತನಾಡಿದ ಅವರು, ‘ಜ.11ರಿಂದ ಮಾರ್ಚ್ 30ರವರೆಗೆ ತರಬೇತಿ ನಡೆಸಲು ಉದ್ದೇಶಿಸಲಾ
ಗಿದೆ ಎಂದರು.
ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಕ್ರಮಬದ್ಧಗೊಳಿಸುವಿಕೆಯ ಯೋಜನೆಯನ್ನು, ಆತ್ಮನಿರ್ಭರ ಭಾರತದ ಕಲ್ಪನೆಯ ಭಾಗವಾಗಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯವು ಅನುಷ್ಠಾನ ಮಾಡಲು ಉದ್ದೇಶಿಸಿರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮವು (ಕೆಪೆಕ್) ಪ್ರತಿ ತಾಲ್ಲೂಕಿನಿಂದ ಇಬ್ಬರು ರೈತರನ್ನು ಆಯ್ಕೆ ಮಾಡಿ, 50 ಮಂದಿಯ ಗುಂಪು ರಚಿಸಿ ಒಟ್ಟು 500 ಮಂದಿಗೆ ತರಬೇತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಆರು ದಿನಗಳ ಈ ತರಬೇತಿಯಲ್ಲಿ ಕೊನೆಯ ಎರಡು ದಿನ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಬಗ್ಗೆ ಒತ್ತು ನೀಡಲಾಗುವುದು. ವಿಶೇಷವಾಗಿ ಮೆಕ್ಕೆಜೋಳ, ತೊಗರಿ ಹಾಗೂ ಸಿರಿಧಾನ್ಯಗಳ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಒಂದು ಜಿಲ್ಲೆ, ಒಂದು ಉತ್ಪನ್ನ ಅಥವಾ ಬೆಳೆ ಪ್ರೋತ್ಸಾಹಿಸುವುದು ಯೋಜನೆಯ ಉದ್ದೇಶ. ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ಈ ಯೋಜನೆಯಡಿ ಉತ್ಪನ್ನಗಳನ್ನು ಗುರುತಿಸಿ, ಉತ್ಪನ್ನದ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡ್ ಅಭಿವೃದ್ಧಿ, ಮಾರುಕಟ್ಟೆ ಪ್ರೋತ್ಸಾಹಿಸಲು ತರಬೇತಿ ನೀಡಲಾಗುವುದು ಎಂದೂ ಸಚಿವರು ಹೇಳಿದರು.