ಕೃಷಿ ಜಾಗರಣ ಅಗ್ರಿನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ನೀಡುವಂತಿಲ್ಲ!
2. ಚಿಕ್ಕಬಳ್ಳಾಪುರದಲ್ಲಿ ಆಲೂಗಡ್ಡೆಗೆ ಅಂಗಮಾರಿ ರೋಗ
3. ತೊಗರಿ ಬೆಳೆ ಹಾನಿ: ರೈತ ಆತ್ಮಹತ್ಯೆ
4. ಹಕ್ಕುಪತ್ರ ವಿತರಣೆಯಲ್ಲಿ ರಾಜ್ಯ ಸರ್ಕಾರದಿಂದ ದಾಖಲೆ!
5. ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ತಾಂಡಾಗಳಿಗೆ ಸರ್ಕಾರದಿಂದ ಸೌಲಭ್ಯ
6. ಹಳೆಯ ವಾಹನಗಳು ಗುಜರಿಗೆ: ಸರ್ಕಾರದಿಂದ ಮಾಸ್ಟರ್ ಪ್ಲಾನ್!
7. 40 ವರ್ಷ ಲಾಟರಿ ಖರೀದಿಸಿದವನಿಗೆ ಸಿಕ್ಕಿತು ಬರೋಬ್ಬರಿ 5 ಕೋಟಿ!
8. ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ: ಕನ್ನಡದಲ್ಲೇ ಸಿಗಲಿದೆ ರೈಲ್ವೆ ಮಾಹಿತಿ
9. 30 ಸಾವಿರ ಕೋಟಿ ಸಬ್ಸಿಡಿಗೆ ರಸಗೊಬ್ಬರ ಸಚಿವಾಲಯ ಮನವಿ
10. ಉದ್ಯಮದಲ್ಲಿ ಮಹಿಳೆಯರಿಗೆ ಯಶಸ್ಸಿನ ಮಂತ್ರಗಳು: ಎಫ್‌ಎಂಸಿ ಮತ್ತು ಕೃಷಿ ಜಾಗರಣದಿಂದ ವಿಶೇಷ ಕಾರ್ಯಕ್ರಮ
ಸುದ್ದಿಗಳ ವಿವರ ಈ ರೀತಿ ಇದೆ.
ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ನೀಡುವಂತಿಲ್ಲ!
ಈ ರೀತಿಯ ಒಂದು ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ. ಇತ್ತೀಚಗೆ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳ ಬ್ಯಾಗ್ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಕಾಂಡೋಮ್ ಪತ್ತೆಯಾಗಿತ್ತು. ಈ ಬೆಳವಣಿಗೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಔಷಧ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಮಾಡಿದೆ. ಅಲ್ಲದೇ ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆ ಈ ವಿಷಯದ ಕುರಿತು ತೀವ್ರವಾದ ಚರ್ಚೆ ನಡೆದಿದ್ದವು. ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದರ ಕುರಿತು ಸಹ ಚರ್ಚೆ ನಡೆದಿತ್ತು. ಇದೀಗ ರಾಜ್ಯ ಔಷಧ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಮಕ್ಕಳು ಕೆಟ್ಟ ಚಟಕ್ಕೆ ಬೀಳುತ್ತಿರುವ ಆತಂಕದ ಮಧ್ಯೆ ಹೊಸ ಕಾನೂನು ರೂಪಿಸಿದೆ. ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾದ ಕಾರಣ ಇನ್ಮುಂದೆ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ನೀಡದಂತೆ ಮೆಡಿಕಲ್ ಶಾಪ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಈಗಾಗಲೇ ಎಲ್ಲಾ ಮೆಡಿಕಲ್ ಶಾಪ್‌ಗಳಿಗೆ ರಾಜ್ಯ ಔಷಧ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ ಪ್ರಕರಣ ಬೆನ್ನಲೆ ಈ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದೊಂದಿಗೆ ಮಾತಾಡಿ ಈ ನಿರ್ಧಾರಕ್ಕೆ ಬರಲಾಗಿದೆ.
----------
2. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾದ ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿರುವುದರಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ಬಹುತೇಕ ರೈತರು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಜನವರಿ ಅಂತ್ಯದವರೆಗೂ ಆಲೂಗಡ್ಡೆ ಬಿತ್ತನೆ ಮಾಡುತ್ತಾರೆ. ಈ ಬಾರಿಯೂ ರೈತರು ನೂರಾರು ಹೆಕ್ಟೇರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದಾರೆ. ಆದರೆ, ಡಿಸೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಕಾಣಿಸಿಕೊಂಡ ಮಾಂಡೌಸ್ ಚಂಡಮಾರುತದಿಂದಾಗಿ ಬಿತ್ತನೆ ಮಾಡಿದ್ದ ಆಲೂಗಡ್ಡೆ ಬೆಳೆಯಲ್ಲಿ ನೀರು ನಿಂತು ಕೊಳೆಯ
ಲಾರಂಭಿಸಿತು. ಇದರಿಂದ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಅಲ್ಲದೇ ಜಡಿಮಳೆಯಿಂದ ಭೂಮಿಯಲ್ಲಿ ಅತಿಯಾದ ತೇವಾಂಶ ಉಂಟಾಗಿದ್ದರಿಂದ ಆಲೂಗಡ್ಡೆ ಬಿತ್ತನೆಯನ್ನು ರೈತರು ಮುಂದೂಡಿದ್ದರು. ಇದರಿಂದ ಡಿಸೆಂಬರ್ ತಿಂಗಳ ಅಂತ್ಯದವರೆಗೂ ಆಲೂಗಡ್ಡೆ ಬಿತ್ತನೆ ಹಿನ್ನೆಡೆಗೆ ಕಾರಣವಾಗಿದೆ. ಕೆಲವು ಕಡೆ ಈಗಲೂ ಬಿತ್ತನೆ ನಡೆಯುತ್ತಿದ್ದರೆ, ಮತ್ತೆ ಕೆಲವು ಕಡೆ ಬೆಳೆ ಕೊಯ್ಲು ಹಂತವನ್ನು ತಲುಪಿದೆ. ನಿರಂತರ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿ ಹೂ ಬಿಡುವ ಮುನ್ನವೇ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ಕಾಣಿಸಿಕೊಂಡಿದೆ.
----------
3. ಕಲಬುರಗಿಯ ಕಮಲಾಪುರದ ಕುದಮೂಡ ಗ್ರಾಮದಲ್ಲಿ ಬೆಳೆ ಹಾನಿಯಿಂದ ಮನನೊಂದು ರೈತ ಧೋಂಡಿಬಾ ಕಲ್ಪಪ್ಪ ಪೂಜಾರಿ ಎಂಬವರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿಗೆ ಬುಧವಾರ ಬೆಳಿಗ್ಗೆ ತೆರಳಿದ ಧೋಂಡಿಬಾ ಅವರು ಕ್ರಿಮಿನಾಶಕ ಸೇವಿಸಿದರು. ಅಲ್ಲಿ ಬಿದ್ದು ಹೊರಳಾಡುತ್ತಿದ್ದ ಅವರನ್ನು ಗಮನಿಸಿದ ಪರಿಚಿತರು ಮತ್ತು ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ರೈತ ಧೋಂಡಿಬಾ ಹೆಸರಿನಲ್ಲಿ 4 ಎಕರೆ, ತಾಯಿ ಶಿವಕಾಂತಾಬಾಯಿ ಹೆಸರಿನಲ್ಲಿ 6 ಎಕರೆ ಜಮೀನಿದೆ. 9 ಎಕರೆಯಲ್ಲಿ ತೊಗರಿ ಮತ್ತು 1 ಎಕರೆಯಲ್ಲಿ ಜೋಳ ಬಿತ್ತನೆ ಮಾಡಿದ್ದರು. ನೆಟೆ ರೋಗದಿಂದ ತೊಗರಿ ಸಂಪೂರ್ಣ ಹಾನಿಯಾಗಿತ್ತು. ಅಲ್ಲದೇ ಖಾಸಗಿ ಮತ್ತು ಬ್ಯಾಂಕ್‌ನಲ್ಲಿ ಅಂದಾಜು 10 ಲಕ್ಷ ಸಾಲ ಹೊಂದಿದ್ದರು ಎನ್ನಲಾಗಿದೆ. ಕಲಬುರಗಿಯಲ್ಲಿ ನೆಟೆ ರೋಗದಿಂದ ಬೆಳೆ ಹಾನಿಯಾಗುತ್ತಿದ್ದು, ರೈತರು ಸಂಕಷ್ಟದಲ್ಲಿ ಇದ್ದಾರೆ.
----------
4. 52 ಸಾವಿರ ಬಂಜಾರ ಸಮುದಾಯಕ್ಕೆ ಏಕಕಾಲಕ್ಕೆ ನಿವೇಶನ ಹಕ್ಕುಪತ್ರ ನೀಡುವ ಮೂಲಕ ರಾಜ್ಯ ಸರ್ಕಾರ ಹೊಸ ದಾಖಲೆ ಸೃಷ್ಟಿ ಮಾಡಿದೆ. ಕಲಬುರಗಿಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು 52,072 ಬಂಜಾರ ಸಮುದಾಯದ ಕುಟುಂಬಗಳಿಗೆ ಏಕಕಾಲಕ್ಕೆ ನಿವೇಶನ ಹಕ್ಕುಪತ್ರ ವಿತರಿಸಿದರು. ಇದು ಹೊಸ ದಾಖಲೆ ಸೃಷ್ಟಿಸಿದೆ. ಈ ಮೂಲಕ ಕಂದಾಯ ಇಲಾಖೆಯ ಈ ಕೆಲಸ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ ಆಗಿದೆ. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ಕರ್ನಾಟಕ ಘಟಕದ ಉಪಾಧ್ಯಕ್ಷೆ ವಸಂತ ಕವಿತಾ ಅವರು ಕಂದಾಯ ಸಚಿವ ಆರ್.ಅಶೋಕ ಅವರಿಗೆ ಪ್ರಮಾಣಪತ್ರ ನೀಡಿದರು. ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
----------
5. ಕಲಬುರಗಿಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕರ್ನಾಟಕದಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. ವೇದಿಕೆಯಲ್ಲಿ ಸಾಂಕೇತಿಕವಾಗಿ ಐದು ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಪ್ರಧಾನಿ ಮೋದಿ ಅವರು, ಬಂಜಾರ ಸಮುದಾಯದವರು ವಾಸಿಸುವ ಮನೆಗಳಿಗೆ ಹಕ್ಕುಪತ್ರ ವಿತರಿಸಬೇಕು ಎಂಬ ಮೂರು ದಶಕಗಳ ಬೇಡಿಕೆಯನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ಮಾಡಿದ್ದವು. ಅವರಿಗೆ ಭದ್ರ ನೆಲೆ ಒದಗಿಸಲು ನಮ್ಮ ಸರ್ಕಾರವೇ ಬರಬೇಕಾಯಿತು ಎಂದರು. ಅಲ್ಲದೇ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ತಾಂಡಾಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಶೌಚಾಲಯವುಳ್ಳ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮನೆಗಳಿಗೆ ನಳದ ಸಂಪರ್ಕ, ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗುವುದು. ದೆಹಲಿಯಲ್ಲಿ ನಿಮ್ಮ ಮಗ ಇದ್ದಾನೆ ಎಂದು ಭಾವಿಸಿ ನೆಮ್ಮದಿಯಿಂದ ಇರಿ ಎಂದರು.
----------
6. ರಾಜ್ಯದಲ್ಲಿ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಸರ್ಕಾರವು ಸಿದ್ಧತೆ ಮಾಡಿಕೊಳ್ಳುತ್ತಿದ್ದು, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಹಾಗೂ 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳನ್ನು ನಿಷೇಧಿಸಲು ಸಿದ್ಧತೆ ಮಾಡಿಕೊಂಡಿದೆ. ಇದನ್ನು ಮೊದಲು ಬೆಂಗಳೂರಿನಲ್ಲಿ ಪರಿಣಾಮಕಾರಿ
ಯಾಗಿ ಜಾರಿ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿದೆ. ಅಲ್ಲದೇ ಹಳೆ ವಾಹನಗಳಿಂದ ತೀವ್ರವಾದ ಮಾಲಿನ್ಯ ಸೃಷ್ಟಿಯಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗುಜರಿ ನೀತಿಯನ್ನು ಜಾರಿ ಮಾಡಲು ಮಾಸ್ಟರ್ ಪ್ಲಾನ್ ಮಾಡಿದೆ. ಈ ಸಂಬಂಧ ಸರ್ಕಾರ ಗುಜರಿಗೆ ನೀತಿಗೆ ಅನುಮೋದನೆ ನೀಡಿದ್ದು, ತಿಂಗಳೊಳಗೆ ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ.
----------
----------
7. ಪಂಜಾಬ್‌ನಲ್ಲೊಬ್ಬರು ಬರೋಬ್ಬರಿ 40 ವರ್ಷಗಳ ಕಾಲ ಲಾಟರಿ ಖರೀದಿಸುತ್ತಿದ್ದರು. ಕೊನೆಗೂ ಅವರಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದು, ಬರೋಬ್ಬರಿ 5 ಕೋಟಿ ಗೆದಿದ್ದಾರೆ. ಇಳಿವಯಸ್ಸಿನಲ್ಲಿ ಅವರ ಹುಮ್ಮಸ್ಸು ಹಿಮ್ಮಡಿಯಾಗಿದೆ. ಪಂಜಾಬ್‌ನ 88 ವರ್ಷದ ವೃದ್ಧರೇ ಆ ಅದೃಷ್ಟವಂತರು, ಇಳಿ ವಯಸ್ಸಿನಲ್ಲಿ ಅವರು 5 ಕೋಟಿ ಬಹುಮಾನ ಗೆದ್ದಿದ್ದಾರೆ. ಜನವರಿ 16ರಂದು, ಪಂಜಾಬ್ ರಾಜ್ಯ ಮಕರ ಸಂಕ್ರಾಂತಿ ಲಾಟರಿ ಫಲಿತಾಂಶ ಬಂದಿದ್ದು, 88 ವರ್ಷದ ಮಹಾಂತ್ ದ್ವಾರಕ ದಾಸ್ ಅವರಿಗೆ 5 ಕೋಟಿಯ ಮೊದಲ ಬಹುಮಾನ ಬಂದಿದೆ. ಸುದೀರ್ಘ ಕಾಲ ಅವರು ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಕೊನೆಗೂ ಅವರ ಆಸೆ ಈಡೇರಿದೆ. ಇನ್ನು ಶೇಕಡ 30ರಷ್ಟು ತೆರಿಗೆ ಕಡಿತದ ಬಳಿಕ ಅವರಿಗೆ ಹಣ ನೀಡಲಾಗುತ್ತದೆ ಎಂದು ಲಾಟರಿ ನಿರ್ವಹಣೆಯ ಸಹ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.
----------
8. ಈ ಹಿಂದೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ uts ಆಪ್ ಬಳಸಿ ರೈಲ್ವೆ ಸೇವೆಗಳನ್ನು ಪಡೆಯಬಹುದಾಗಿತ್ತು. ಇದೀಗ UTS ಆಪ್ ಬಳಸಿ ಕಾಯ್ದಿರಿಸದ ಟಿಕೆಟ್ ಪಡೆಯುವ ಅವಕಾಶ ಕನ್ನಡದಲ್ಲೂ ಸಿಗಲಿದೆ. ಈ ಮೊದಲು ಪ್ರಯಾಣಿಕರು ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಇದನ್ನು ತಪ್ಪಿಸಿಲು ರೈಲ್ವೆ ಇಲಾಖೆ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತ್ರ UTS ಆಪ್ ನ ಬಳಕೆಯ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವ ಅವಕಾಶ ಕಲ್ಪಿಸಿತ್ತು. ಇದೀಗ UTS ಆಪ್ ಪ್ರಾದೇಶಿಕ ಕನ್ನಡ ಭಾಷೆಯಲ್ಲಿ ಸಹ ಬಳಕೆಗೆ ಅವಕಾಶ ನೀಡಿದೆ. ಪ್ರಯಾಣಿಕರು ತಾವು ಇರುವ ಸ್ಥಳದಿಂದ 20 ಕಿ.ಮೀ ವ್ಯಾಪ್ತಿಯ ಯಾವುದೇ ನಿಲ್ದಾಣದಿಂದ ಪ್ರಯಾಣಿಸಲು ಈ UTS ಆಪ್ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆದುಕೊಳ್ಳಬಹುದು. ಪ್ರಯಾಣಿಕರು ಈ UTS ಆಪ್ ತಮ್ಮ ಮೊಬೈಲ್‌ಗೆ ಗೂಗಲ್ ಪ್ಲೇ-ಸೋರ್, ವಿಂಡೋಸ್ ಸ್ಟೋರ್ ಹಾಗೂ ಐಪೋನ್ ಪೋನ್ ಬಳಕೆದಾರರು ಆಫಲ್ ಸ್ಟೋರ್ ಮೂಲಕ ಡೌನಲೋಡ್ ಮಾಡಿಕೊಳ್ಳಬಹುದು. ಶೇ.3ರಷ್ಟು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೋನಸ್ ನೀಡುತ್ತದೆ. ಪ್ರಯಾಣಿಕರು UTS ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಯಾಣದ ಸಾಮಾನ್ಯ ಬುಕ್ಕಿಂಗ್ ಟಿಕೆಟ್, ತ್ವರಿತ ಬುಕ್ಕಿಂಗ್ ಟಿಕೆಟ್, ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ಕಿಂಗ್, ಟಿಕೆಟ್‌ನ ಸದ್ಯದ ಮಾಹಿತಿ ತಿಳಿಯುವುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಈ UTS ಆಪ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ.
----------
9. ರಸಗೊಬ್ಬರ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದ ಅಂತಿಮ ತ್ರೈಮಾಸಿಕಕ್ಕೆ ಹೆಚ್ಚುವರಿ 30 ಸಾವಿರ ಕೋಟಿ ರೂಪಾಯಿಯನ್ನು ಸಬ್ಸಿಡಿ ಹಂಚಿಕೆಗಾಗಿ ವಿನಂತಿಸಿದೆ. ರಷ್ಯಾ-ಉಕ್ರೇನ್ ಯುದ್ಧ ಮತ್ತು ಸರಕುಗಳ ಬೆಲೆಗಳ ಏರಿಕೆ, ಮುಖ್ಯವಾಗಿ ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ
ಗಳಂತಹ ಫೀಡ್‌ಸ್ಟಾಕ್‌ಗಳಿಗೆ ಸಬ್ಸಿಡಿ ಅಗತ್ಯಗಳ ಪ್ರಮುಖವಾಗಿದೆ. ಮಣ್ಣಿನ ಪೋಷಕಾಂಶಗಳ ಮೇಲಿನ ಸಬ್ಸಿಡಿಗಾಗಿ ಈಗಾಗಲೇ ಹಣಕಾಸು ಸಚಿವಾಲಯವು ನಿಗದಿಪಡಿಸಿದ 2.15 ಟ್ರಿಲಿಯನ್ ರೂಪಾಯಿಗಳಿಗೆ ಹೆಚ್ಚುವರಿಯಾಗಿರುತ್ತದೆ. ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಪೂರಕ ಅನುದಾನ ವಿನಂತಿಗಳ ಅಡಿಯಲ್ಲಿ 3.26 ಟ್ರಿಲಿಯನ್ ರೂಪಾಯಿಗಳ ನಿವ್ವಳ ವೆಚ್ಚದಲ್ಲಿ ಈಗಾಗಲೇ ಸೇರಿಸಲಾದ ರೂ 1.09 ಟ್ರಿಲಿಯನ್ ಹೆಚ್ಚುವರಿ ರಸಗೊಬ್ಬರ ಸಬ್ಸಿಡಿಗೆ ಇದು ಹೆಚ್ಚುವರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
----------
10. ಉದ್ಯಮದಲ್ಲಿ ಮಹಿಳೆಯರಿಗೆ ಲಭ್ಯವಿರುವ ಸಾಕಷ್ಟು ಉದ್ಯೋಗಾವ
ಕಾಶಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಜಾಗರಣ ಕೃಷಿ ವಿಜ್ಞಾನದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ FMC ಕಾರ್ಪೊರೇಷನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. FMC ಕಾರ್ಪೊರೇಷನ್ ಮಹಿಳೆಯರನ್ನು ಸಬಲೀಕರಣಗೊಳಿಸಲು ಶ್ರಮಿಸುತ್ತಿದೆ. ವೈವಿಧ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಕ್ಷೇತ್ರಗಳಲ್ಲಿ ಅತ್ಯುತ್ತಮ ವೃತ್ತಿ ಮತ್ತು ಪ್ರಗತಿಯ ಅವಕಾಶಗಳನ್ನು ಒದಗಿಸುತ್ತದೆ. ಮಹಿಳಾ ಪ್ರತಿಭೆಗಳ ನಾವೀನ್ಯತೆ ಮತ್ತು ಪರಿಣತಿಯು ಈ ಉದ್ಯಮವನ್ನು ಉನ್ನತೀಕರಿಸಬಹುದು ಎಂದು FMC ಮನವರಿಕೆಯಾಗಿದೆ. ಕೃಷಿ- ಒಳಾಂಗಣ ಮಾರುಕಟ್ಟೆಯ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುವುದರ ಬಗ್ಗೆ ಬುಧವಾರ ನಡೆದ ಸಂವಾದದಲ್ಲಿ ಚರ್ಚಿಸಲಾಯಿತು.