News

ಹಳೆ ವಾಹನ ಮಾಲೀಕರಿಗೆ ಆಘಾತ ನೀಡಿದ ಸಾರಿಗೆ ಇಲಾಖೆ

18 March, 2021 9:57 PM IST By:

ಹಳೆಯ ವಾಹನಗಳ ನೋಂದಣಿ ನವೀಕರಣದ ಶುಲ್ಕವನ್ನು ಕೇಂದ್ರ ಸರ್ಕಾರ ಅಪಾರ ಪ್ರಮಾಣದಲ್ಲಿ ಹೆಚ್ಚಿಸಿದೆ. 2021ರ ಅಕ್ಟೋಬರ್‌ 1ರಿಂದ ಹೊಸ ಶುಲ್ಕ ವ್ಯವಸ್ಥೆ ಜಾರಿಯಾಗಲಿದೆ. ಹಳೆಯ ಮತ್ತು ಮಾಲಿನ್ಯಕ್ಕೆ ಕಾರಣ ವಾಗುವ ವಾಹನಗಳನ್ನು ಸಾರ್ವಜನಿಕರು ಬಳಸುವುದನ್ನು ನಿಯಂತ್ರಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಕೇಂದ್ರೀಯ ಮೋಟಾರ್‌ ವಾಹನಗಳ (ತಿದ್ದುಪಡಿ) ನಿಯಮಾವಳಿ– 2021 ಅನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿದೆ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು 2021ರ ಕೇಂದ್ರ ಬಜೆಟ್'ನಲ್ಲಿ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಪ್ರಕಟಿಸಿದ್ದಾರೆ. ಈ ನೀತಿಯನ್ವಯ 20 ವರ್ಷ ಹಳೆಯದಾದ ವೈಯಕ್ತಿಕ ಹಾಗೂ 15 ವರ್ಷ ಹಳೆಯದಾದ ಕಮರ್ಷಿಯಲ್ ವಾಹನಗಳು ಫಿಟ್‌ನೆಸ್ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಹೊಸ ನಿಯಮಗಳ ಅನ್ವಯ, 15 ವರ್ಷದ ಹಳೆಯ ವಾಹನವನ್ನು ಗುಜರಿ ಹಾಕುವ ಪ್ರಮಾಣಪತ್ರವನ್ನು ಮಾಲೀಕ ಪಡೆದುಕೊಂಡರೆ ಹೊಸ ವಾಹನ ಖರೀದಿಸಲು ನೋಂದಣಿ ಪ್ರಮಾಣಪತ್ರದ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಅಕ್ಟೋಬರ್‌ 1ಕ್ಕೆ ಮುನ್ನವೇ ಗುಜರಿಗೆ ಹಾಕುವ ಪ್ರಮಾಣಪತ್ರ ಪಡೆಯದಿದ್ದರೆ ಹಳೆಯ ವಾಹನಕ್ಕೆ ವಿನಾಯಿತಿ ದೊರೆಯುವುದಿಲ್ಲ. ಈ ನಿಯಮವು 15 ವರ್ಷದ ಹಳೆಯದಾದ ಎಲ್ಲ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ದ್ವಿಚಕ್ರ ವಾಹನದ ಹೊಸ ನೋಂದಣಿ ಪ್ರಮಾಣ ಪತ್ರಕ್ಕೆ 300, 15 ವರ್ಷದ ಹಳೆಯ ವಾಹನಕ್ಕೆ 1000, ತ್ರಿಚಕ್ರ ವಾಹನಗಳ ಹೊಸ ನೋಂದಣಿ ಪ್ರಮಾಣ ಪತ್ರಕ್ಕೆ 600, ನವೀಕರಣಕ್ಕೆ 2500 ಶುಲ್ಕ ನಿಗದಿ ಪಡಿಸಲಾಗಿದೆ. ಲಘು ಮೋಟಾರು ವಾಹನಗಳ ಹೊಸ ನೋಂದಣಿ ಪ್ರಮಾಣ ಪತ್ರಕ್ಕೆ 600 ಮತ್ತು ನವೀಕ ರಣಕ್ಕೆ 5000 ನಿಗದಿಪಡಿಸಲಾಗಿದೆ.

ಆಮದು ಮಾಡಿಕೊಳ್ಳಲಾದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಹೊಸ ನೋಂದಣಿಗೆ 5000 ಮತ್ತು ಹಳೆಯ ವಾಹನದ ನವೀಕರಣಕ್ಕೆ 40,000 ನಿಗದಿಪಡಿಸಲಾಗಿದೆ

ಇದರ ಜೊತೆಗೆ ಸ್ಮಾರ್ಟ್ ಕಾರ್ಡ್ ಆಧಾರಿತ ಆರ್‌ಸಿ ನೀಡಲು ರೂ.200 ಹೆಚ್ಚುವರಿ ಶುಲ್ಕ ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ. ಹಳೆಯ ವಾಹನಗಳು ರಸ್ತೆಗಿಳಿಯುವುದನ್ನು ತಡೆಯಲು ಕೇಂದ್ರ ಸರ್ಕಾರವು ಇಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ