News

ಈ ವರ್ಷ ಶಿಕ್ಷಕರಿಗೆ ಅಕ್ಟೋಬರ್ (ಮಧ್ಯಂತರ) ರಜೆ ರದ್ದು

02 October, 2020 8:23 AM IST By:

ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಕ್ಪೋಬರ್ 3 ರಿಂದ 26ರವರೆಗೆ ನಿಗದಿಪಡಿಸಿದ್ದ ಮಧ್ಯಂತರ ರಜೆಯನ್ನು ಸಾರ್ವಜನಿಕರ ಶಿಕ್ಷಣ ಇಲಾಖೆ ರದ್ದುಪಡಿಸಿದೆ.

ಈ ಮೊದಲು ಅಕ್ಟೋಬರ್ 3 ರಿಂದ 26 ರವರೆಗೆ ಮಧ್ಯಂತರ ರಜೆ (ದಸರಾ ರಜೆ) ನಿಗಧಿಪಡಿಸಲಾಗಿತ್ತು. ಅಷ್ಟೇ ಅಲ್ಲ, 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ  ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಗಳನ್ನು ನಿಗಿದಿಗೊಳಿಸಿ ಫೆ. 14 ರಂದು ಹೊರಡಿಸಿದ್ದ ಆದೇಶವನ್ನೂ ರದ್ದುಪಡಿಸಲಾಗಿದೆ.

ಪ್ರಸ್ತುತ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ಇಲಾಖೆಯಿಂದ ವಿವಿಧ ಹಂತದಲ್ಲಿ ಜಾರಿಗೊಳಿಸುವ ಆದೇಶಗಳಂತೆ ಕಾರ್ಯನಿರ್ವಹಿಸಬೇಕು. ಅಲ್ಲದೆ, ಆಗಸ್ಟ್ ತಿಂಗಳಲ್ಲಿ ಹೊರಡಿಸಿದ ಸುತ್ತೋಲೆ ಪ್ರಕಾರ ವಿದ್ಯಾಗಮಾ ಕಲಿಕಾ ಕಾರ್ಯಕ್ರಮವನ್ನು ಯಥಾವತ್ತಾಗಿ ಮುಂದಿನ ಆದೇಶದವರೆಗೆ ಅನುಷ್ಠಾನಗೊಳಿಸಬೇಕು ಎಂದು ಸಾರ್ವಜನಿಕರ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಕಾಲೇಜು ಆರಂಭಕ್ಕೆ ಶೀಘ್ರ ಮಾಹಿತಿ:

ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಆರಂಭ ಮಾಡುವ ಬಗ್ಗೆ ಶೀಘ್ರದಲ್ಲೇಯಿ ಸ್ಪಷ್ಟ ಮಾಹಿತಿಯನ್ನು ಸರ್ಕಾರ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಲಾಕಾಲೇಜುಗಳ ಆರಂಭ ಕುರಿತಂತೆ ಯುಜಿಸಿ ಈಗಾಗಲೇ ಮಾರ್ಗಸೂಚಿಗಳನ್ನು ನೀಡಿದೆ. ಅದರಂತೆ ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.ವಿದ್ಯಾರ್ಥಿ ಮತ್ತು ಪೋಷಕರಿಗೆ ಯಾವುದೇ ಸಮಸ್ಯೆ ಆಗದಿಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದಿದ್ದಾರೆ.

ಶಾಲೆ ತೆರೆಯುವ ಧಾವಂತವಿಲ್ಲ:

ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಶಾಲೆ ತೆರೆಯುವ ಧಾವಂತ ನನಗಿಲ್ಲ. ಇದು ಪ್ರತಿಷ್ಠೆ ಕೂಡ ಅಲ್ಲ, ಎಲ್ಲಾ ಪಾಲಕರಂತೆ ನನಗೂ ಆತಂಕ ಇದೆ. ನನಗೂ ಮಕ್ಕಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಆಲಿಸುವ ಸರಣಿ ಆರಂಭಿಸಿದ್ದೇವೆ. ಶೀಘ್ರದಲ್ಲಿಯೇ ಎಲ್ಲರ ಜೊತೆಗೆ ಮಾತನಾಡಿ, ಮಕ್ಕಳ ಹಿತಕ್ಕೆ ಪೂರಕವಾಗುವಂತಹ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹೇಳಿದ್ದಾರೆ.