News

ರಾಜ್ಯದಲ್ಲಿ ಈಗ ನೂರು ಬರಪೀಡಿತ ತಾಲೂಕುಗಳು

16 October, 2018 1:45 PM IST By:

ಬೆಂಗಳೂರು: ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿರುವ 86 ತಾಲೂಕುಗಳ ಪಟ್ಟಿಗೆ ಸೋಮವಾರ ಮತ್ತೆ 14 ತಾಲೂಕುಗಳನ್ನು ಸೇರಿಸಿ ಸರಕಾರ ಸೋಮವಾರ ಆದೇಶ ಹೊರಡಿಸಿದ್ದು,ಬರಪೀಡಿತ ತಾಲೂಕುಗಳ ಸಂಖ್ಯೆ 100ಕ್ಕೇರಿದೆ.

ಇದರೊಂದಿಗೆ 2018-19ನೇ ಸಾಲಿನ ಮುಂಗಾರು ಹಂಗಾಮಿನ ಅವಧಿಗೆ ಸಂಬಂಧಿಸಿದಂತೆ ಬರಪೀಡಿತ ತಾಲೂಕುಗಳಲ್ಲಿ ಹೆಚ್ಚಳವಾಗಿದೆ. ಹೊಸದಾಗಿ ಆನೇಕಲ್‌, ದೇವನಹಳ್ಳಿ, ದೊಡ್ಡಬಳ್ಳಾಪುರ, ತುರುವೇಕೆರೆ, ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ, ಜಗಳೂರು, ಪಾಂಡವಪುರ, ಔರಾದ್‌, ಬಸವಕಲ್ಯಾಣ, ಅಥಣಿ, ಬೀಳಗಿ ಹಾಗೂ ಮುಧೋಳ ತಾಲೂಕುಗಳು ಸೇರ್ಪಡೆಯಾಗಿವೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದ್ದಾರೆ.

ಕೇಂದ್ರ ಸರಕಾರವು ಪ್ರಕಟಿಸಿರುವ 2016ರ ಬರ ಕೈಪಿಡಿ ಮತ್ತು ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಕಡ್ಡಾಯಪಡಿಸಿರುವ ಅಂಶಗಳ ಪ್ರಕಾರ ಈ ತಾಲೂಕುಗಳು ಕೂಡ ಬರಪೀಡಿತವಾಗಿವೆ.

ಈ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವುದು, ಕುಡಿಯುವ ನೀರು ಪೂರೈಸುವುದು, ಜಾನುವಾರುಗಳಿಗೆ ಮೇವು ಸರಬರಾಜು ಮತ್ತಿತರ ಬರ ಪರಿಹಾರ ಕಾರ್ಯಗಳನ್ನು ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಕೈಗೊಳ್ಳಲಾಗುವುದು. ಜತೆಗೆ ಈ ಪ್ರದೇಶಗಳಲ್ಲಿ ಆಗಿರುವ ಬೆಳೆ ಹಾನಿ ಬಗ್ಗೆ ತಕ್ಷಣವೇ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.