News

ಇನ್ಮುಂದೆ ನಿಮ್ಮ ವಾಹನದಿಂದ ನೀವು ಯಾವ ರಾಜ್ಯಕ್ಕೆ ಬೇಕಾದರೂ ಕೂಡ ಪ್ರಯಾಣ ಬೆಳೆಸಬಹುದು

29 August, 2021 7:33 PM IST By:

ಒಂದು ರಾಜ್ಯದ ಇನ್ನೊಂದು ರಾಜ್ಯಕ್ಕೆ ಪದೇ ಪದೇ ಹೋಗುತ್ತಿದ್ದರೆ ಇನ್ನೂ ಮುಂದೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಾಸ್ತವ್ಯ ಬದಲಿಸಿದರೆ ವಾಹನ ಮರುನೋಂದಣಿ ಮಾಡಿಸುವ ತಲೆನೋವು ಇನ್ನಿಲ್ಲ. ಇನ್ಮುಂದೆ ನೀವು ಸಂಬಂಧಪಟ್ಟ RTO ಗೆ ಹೋಗಿ ನಿಮ್ಮ ವಾಹನವನ್ನು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ. ಇಡೀ ದೇಶಕ್ಕೆ ಅನ್ವಯಿಸುವ ನೋಂದಣಿ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ವರ್ಷದ ಸೆಪ್ಟೆಂಬರ್ 15 ರಿಂದ ಬಿಹೆಚ್ ಸರಣಿಯ ಹೊಸ ರೀತಿಯ ನೋಂದಣಿ ಸಂಖ್ಯೆ ಜನರಿಗೆ ಲಭಿಸಲಿದೆ.

ಹೌದು, ಭಾರತ ಸರ್ಕಾರವು ವಾಹನ ನೋಂದಣಿಗೆ ರಾಷ್ಟ್ರೀಯ ನೋಂದಣಿಗೆ ವ್ಯವಸ್ಥೆ ಮಾಡಿದೆ. ಇದರಿಂದ ಇದೀಗ ವಾಹನ ಹೊಂದಿರುವವರು ತಮ್ಮ ವಾಹನಗಳ ಮೇಲೆ 'BH-Series' ಸಂಖ್ಯೆಯನ್ನು ಹಾಕಲು ಸಾಧ್ಯವಾಗಲಿದೆ. ಈ ಸರಣಿಯ ಅಡಿಯಲ್ಲಿ ನೋಂದಾಯಿಸುವಾಗ, ವಾಹನವು ಬೇರೆ ಬೇರೆ ರಾಜ್ಯಗಳಿಗೆ ಹೋದರೆ ಅದನ್ನು ಪುನಃ ನೋಂದಾಯಿಸುವ ಅಗತ್ಯವಿಲ್ಲ.

ಈ ಸಂಖ್ಯೆ ಹೇಗಿರಲಿದೆ?

ಬಿಎಚ್ ಸೀರಿಸ್‍ನಡಿ ವಾಹನದ ಸಂಖ್ಯೆ YY BH #### XX  ಮಾದರಿಯಲ್ಲಿ ಇರಲಿದೆ. YY ಅಂದರೆ ವಾಹನ ನೋಂದಣಿಯಾದ ವರ್ಷದ ಎರಡು ಸಂಖ್ಯೆಗಳು, ಬಿಎಚ್ ಅಂದರೆ ಭಾರತ್ ಸೀರಿಸ್ ಕೋಡ್‍ನ ಎರಡು ಸಂಖ್ಯೆಗಳು,  #### ಅಂದರೆ ವಾಹನಕ್ಕೆ ನೀಡುವ ನಾಲ್ಕು ಅಂಕಿಗಳ ನೋಂದಣಿ ಸಂಖ್ಯೆ. XX  ಜಾಗದಲ್ಲಿ  ಎರಡು ಇಂಗ್ಲಿಷ್ ಅಕ್ಷರಗಳು ಇರಲಿವೆ.

ಈಗಿನ ವ್ಯವಸ್ಥೆ ಹೇಗಿದೆ?

ಬೇರೆ ರಾಜ್ಯದಲ್ಲಿ ಹೊಸ ನೋಂದಣಿ ಮಾಡಬೇಕಾದರೆ ಮೊದಲು ವಾಹನ ಮಾಲೀಕರು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್(ಎನ್‍ಒಸಿ) ಮಾಡಬೇಕಾಗುತ್ತದೆ. ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 47ರ ಪ್ರಕಾರ ಒಂದು ರಾಜ್ಯದಲ್ಲಿ ನೋಂದಣಿಯಾದ ವಾಹನ ಮತ್ತೊಂದು ರಾಜ್ಯದಲ್ಲಿ ಬಳಸುವುದಿದ್ದರೆ ಅದಕ್ಕೆ ಆ ರಾಜ್ಯದಲ್ಲಿ ತೆರಿಗೆ ಪಾವತಿಸಬೇಕು. ಆ ರಾಜ್ಯದ ತೆರಿಗೆ ಪಾವತಿಸಲು 12 ತಿಂಗಳ ಗಡುವು ನೀಡಲಾಗುತ್ತಿದೆ. ಇಷ್ಟೇ ಅಲ್ಲದೇ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರವಾದರೆ ಮತ್ತೆ ಹೊಸದಾಗಿ ರಸ್ತೆ ತೆರಿಗೆ ಕಟ್ಟಬೇಕು. ಇದರ ಜೊತೆ ಹಿಂದೆ ಇದ್ದ ರಾಜ್ಯದಲ್ಲಿ ಕಟ್ಟಲಾಗಿದ್ದ ತೆರಿಗೆಯನ್ನು ವಾಪಸ್ ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕು. ಇದೊಂದು ದೀರ್ಘ ಪ್ರಕ್ರಿಯೆ ಆಗಿತ್ತು. ಆದರೆ ಈಗ ಇದಕ್ಕೆಲ್ಲ ಅಲೆಯುವ ಅವಶ್ಯಕತೆಯಿಲ್ಲ.  ಬಿಹೆಚ್ ನೋಂದಣಿ ಸಂಖ್ಯೆ ಹೊದಿರುವ ವಾಹನಗಳು ದೇಶದೊಳಗೆ ಯಾವುದೇ ರಾಜ್ಯಕ್ಕೆ ಹೋದರೂ ಮರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ.

ಅವಧಿ ಹೇಗೆ?

ಬಿಎಚ್ ಸರಣಿಯಲ್ಲಿ 2 ವರ್ಷ ಅವಧಿ ಅಥವಾ 4/6/8 ವರ್ಷ ಹೀಗೆ ಮಲ್ಟಿಪಲ್ ಮಾದರಿಯಲ್ಲಿ ರಸ್ತೆ ತೆರಿಗೆ ಪಾವತಿಸಬಹುದು. 14ನೇ ವರ್ಷದ ನಂತರ ವಾರ್ಷಿಕವಾಗಿ ವಿಧಿಸಲಾಗುತ್ತದೆ. ಈ ವೇಳೆ ಆ ವಾಹನಕ್ಕೆ ಈ ಹಿಂದೆ ಸಂಗ್ರಹಿಸಿದ ಮೊತ್ತದ ಅರ್ಧದಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಆನ್‍ಲೈನ್ ಮೂಲಕವೇ ನಡೆಯಲಿದೆ. 

ಈ ನಂಬರ್ ಯಾರಿಗೆ ಸಿಗಲಿದೆ?

ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿರುವ ಖಾಸಗಿ ಕಂಪನಿಗಳ ನೌಕಕರರಿಗೆ, ರಕ್ಷಣಾ ಪಡೆಗಳ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರದ ನೌಕರರಿಗೆ, ಸರ್ಕಾರಿ ಸ್ವಾಮ್ಯದ ಉದ್ಯಮಗಳ ನೌಕರರ ಖಾಸಗಿ ವಾಹನಗಳಿಗೆ ಹೊಸ ಸರಣಿಯಲ್ಲಿ ನಂಬರ್ ನೀಡಲಾಗುತ್ತದೆ.

ವಿವಿಧ ರಾಜ್ಯಗಳ ನಡುವೆ ವ್ಯಾಪಾರ ಮಾಡುವ ವಾಣಿಜ್ಯ ವಾಹನ ಚಾಲಕರಿಗೆ ಈ ಹೊಸ ವ್ಯವಸ್ಥೆಯಿಂದ ಲಾಭವಾಗಲಿದೆ. ಈ ವ್ಯವಸ್ಥೆಯು ಖಾಸಗಿ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬೇಕಾದರೆ ಅಥವಾ ಬಂದು ಹೋಗುತ್ತಿರುವವರಿಗೆ ಬಹಳ ಉಪಯೋಗಕಾರಿಯಾಗಲಿದೆ.