ಇತ್ತೀಚೆಗೆ ಪ್ರತಿಯೊಂದು ಪತ್ರವ್ಯವಹಾರಗಳು ಡಿಜಿಟಲ್ ರೂಪ ಪಡೆಯುತ್ತಿರುವುದು ತಮಗೆಲ್ಲ ಗೊತ್ತಿದ ಸಂಗತಿ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ದಾಖಲಾತಿಗಳು ಮೊಬೈಲಿನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದೇವೆ. ಈಗ ಡಿಜಿಟಲ್ ವೋಟರ್ ಐಡಿ (ಮತದಾರರ ಗುರುತಿನ ಪತ್ರ) ಯನ್ನೂ ಸಹ ಡೌನ್ಲೋಡ್ ಮಾಡಿಕೊಳ್ಳಬಹುದು.
ಹೌದು, ಚುನಾವಣಾ ಗುರುತಿನ ಚೀಟಿಯ (Voter Id) ಡಿಜಿಟಲ್ ಆವೃತಿ ಜನವರಿ 25ರಿಂದ ದೇಶಾದ್ಯಂತ ಲಭ್ಯವಾಗಲಿದೆ. ಈ ವ್ಯವಸ್ಥೆಗಾಗಿ ಭಾರತೀಯ ಚುನಾವಣಾ ಆಯೋಗವು (Election Commission) e-EPIC ಆ್ಯಪನ್ನು ಬಿಡುಗಡೆ ಮಾಡಲಿದೆ. ಈ ಆ್ಯಪ್ ಬಳಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ನಂತೆಯೇ ವೋಟರ್ ಐಡಿ ಕಾರ್ಡನ್ನು ಆನ್ ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಹಬಹುದು.
1993 ನೇ ಇಸ್ವಿಯಲ್ಲಿ ಪರಿಚಯಿಸಲಾದ ಮತದಾರರ ಫೋಟೊ ಗುರುತಿನ ಚೀಟಿಯು ವ್ಯಕ್ತಿಯ ಗುರುತು ಹಾಗೂ ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿದ ನಂತರ, ಫೋನ್ ಮೂಲಕ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ ಸಿಗುವ ಒಟಿಪಿಯನ್ನುಬಳಸಿ e-EPIC ಆ್ಯಪನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಸಾಮಾನ್ಯ ವೋಟರ್ ಐಡಿಗಿಂತ ವೇಗವಾಗಿ ನಾವು ಪಡೆದುಕೊಳ್ಳಬಹುದು. ವೋಟರ್ ಐಡಿಗೆ ಸಮಾನವಾಗಿ ಡಿಜಿಟಲ್ ವೋಟರ್ ಐಡಿ ಕೂಡ ಅಧಿಕೃತ ದಾಖಲೆಯಾಗಿರಲಿದೆ.
ಹೊಸ ಗುರುತಿನ ಚೀಟಿ ಪಡೆಯಲು ಈಗ ನೀವು ನಾಡಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲಿನಲ್ಲಯೇ ಕ್ಷಣಾರ್ಧದಲ್ಲಿ e-EPIC ಆ್ಯಪನ್ನು ಬಳಸಿ ಡಿಜಿಟಲ್ ವೋಟರ್ ಐಡಿ ಕಾರ್ಡನ್ನು ಪಡೆಯಬಹುದು