News

ವಾಟ್ಸ್ಆ್ಯಪ್ ಮೂಲಕವೂ ಗ್ಯಾಸ್‌ ಸಿಲಿಂಡರ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ವಿವರ!

23 October, 2020 6:30 AM IST By:

ಗ್ಯಾಸ್ ಸಿಲಿಂಡರ್ ಬುಕ್‌ ಮಾಡುವುದು ಇದೀಗ ಮತ್ತಷ್ಟು ಸರಳವಾಗಿದೆ. ಸದ್ಯ ಫೋನ್ ಕರೆ ಮಾಡುವ ಮೂಲಕ ಬುಕ್ ಮಾಡಲಾಗುತ್ತಿದೆ. ಆದರೆ ಈಗ ತೈಲ ಕಂಪನಿಗಳು ಒಂದು ಹೆಜ್ಜೆ ಮುಂದು ಹೋಗಿ ವಾಟ್ಸಪ್‌ನಲ್ಲಿಯೂ ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ನೀಡಿವೆ.ಗ್ರಾಹಕರು ತಮ್ಮ ಸಿಲಿಂಡರ್ ಅನ್ನು ಬುಕ್ ಮಾಡಲು ಗ್ರಾಹಕರ ವಿವರಗಳನ್ನು ತಿಳಿದುಕೊಳ್ಳಲು ವರ್ಷಕ್ಕೆ ಬಳಸಿದ ಕೋಟಾ ಬಗ್ಗೆ ತಿಳಿಯಲು ಮತ್ತು ಬುಕ್ ಮಾಡಲು ವಾಟ್ಸ್ಆ್ಯಪ್ ಸಹಕಾರಿಯಾಗಲಿದೆ.

ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿಸಲಾಗಿರುವ ಫೋನ್ ಸಂಖ್ಯೆಯೊಂದಿಗೆ ಮಾತ್ರ ಈ ವಾಟ್ಸ್ಆ್ಯಪ್ ಸಂಖ್ಯೆಯಲ್ಲಿ ಗ್ಯಾಸ್ ಬುಕ್ ಮಾಡಲು ಅವಕಾಶವಿದೆ. ಗ್ಯಾಸ್ ಸಿಲಿಂಡರ್ ಹೇಗೆ ಬುಕ್ ಮಾಡಬೇಕು ಮತ್ತು ಇದರಿಂದ ಗ್ರಾಹಕರಿಗೆ ಆಗುವ ಪ್ರಯೋಜನಗಳು ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಆರಂಭಿಕವಾಗಿ ಇಂಡೇನ್ ಗ್ಯಾಸ್ (Indane Gas) ಮತ್ತು ಭಾರತ್‌ ಗ್ಯಾಸ್‌ (ಬಿಪಿಸಿಎಲ್) ತನ್ನ ಗ್ರಾಹಕರಿಗೆ ಈ ಸೌಲಭ್ಯ ಪರಿಚಯಿಸಿವೆ. ಕೆಲ ದಿನಗಳ ಹಿಂದೆಯೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್‌) ಗ್ಯಾಸ್‌ ಬುಕಿಂಗ್‌ ತೆಗೆದುಕೊಳ್ಳುವ ವಾಟ್ಸ್ಆ್ಯಪ್ ಸಂಖ್ಯೆಯನ್ನು ಹಂಚಿಕೊಂಡಿದೆ. ಈ ಹಿಂದೆ, ಆನ್‌ಲೈನ್‌, ಮೊಬೈಲ್‌ ಅಪ್ಲಿಕೇಶಗಳ ಮೂಲಕ ಗ್ಯಾಸ ಸಿಲಿಂಡರ್‌ ಬುಕ್‌ ಮಾಡಲಾಗುತ್ತಿತ್ತು. ಇದೀಗ, ಈ ಎಲ್ಲಕ್ಕಿಂತಲೂ ಸರಳ ವಿಧಾನದ (ವಾಟ್ಸ್ಆ್ಯಪ್)ಮೂಲಕ  ಗ್ಯಾಸ್ ಸಿಲೆಂಡರ್ ಬುಕ್ ಮಾಡಬಹುದು.

ಬುಕಿಂಗ್ ಮಾಡುವ ವಿಧಾನ:

ನೀವು ಗ್ಯಾಸ್‌ ಸಂಪರ್ಕ ಪಡೆಯುವಾಗ ನೀಡಿರುವ ಮೊಬೈಲ್‌ ಸಂಖ್ಯೆಯನ್ನೇ ವಾಟ್ಸಪ್‌ನಲ್ಲಿ ಬಳಕೆ ಮಾಡುತ್ತಿದ್ದರೆ ಮಾತ್ರ ಬುಕ್ ಮಾಡುವ ಈ ಅವಕಾಶವಿದೆ.. ಇದಕ್ಕಾಗಿ ಇಂಡೇನ್ ಆಯಿಲ್ (7588888824) ಮತ್ತು ಭಾರತ್‌ ಗ್ಯಾಸ್‌ (1800224344) ನಿರ್ದಿಷ್ಟ ವಾಟ್ಸ್ಆ್ಯಪ್ ಸಂಖ್ಯೆಯನ್ನು ನೀಡಿದೆ. ಇದರ ಮೂಲಕ ಈಗ ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸಬಹುದು. 

ಈ ಸಂಖ್ಯೆಯನ್ನು ನಿಮ್ಮ ಮೊಬೈಲ್‌ಗೆ ಸೇವ್‌ ಮಾಡಿಕೊಂಡ ನಂತರ ಬುಕ್ ಮಾಡಬಹುದು.. ಇಂಡೇನ್‌ ಗ್ಯಾಸ್‌ ಗ್ರಾಹಕರಾದರೆ, Refill ಎಂದು ಟೈಪ್‌ ಮಾಡಬೇಕು, ಭಾರತ್‌ ಗ್ಯಾಸ್‌ ಗ್ರಾಹಕರಾದರೆ 'Hello' ಎಂದು ಮೆಸೇಜ್‌ ಕಳಿಸಿದರೆ ಸಾಕು, ನಿಮ್ಮ ಗ್ಯಾಸ್‌ ಸಿಲಿಂಡರ್‌ ಬುಕ್‌ ಆದಂತೆ. ಗ್ಯಾಸ್‌ ಸಿಲಿಂಡರ್‌ ಬುಕ್‌ ಆಗಿರುವ ಕುರಿತು ಖಾತರಿಪಡಿಸುವ ಮೆಸೇಜ್‌ ಸಹ ಬರುತ್ತದೆ.

ಆನ್ ಲೈನ್ ಪಾವತಿ ಸೌಲಭ್ಯ:

ವಾಟ್ಸ್ಆ್ಯಪ್ ನಲ್ಲಿ  ಕಾಯ್ದಿರಿಸಿದ ನಂತರ ಗ್ರಾಹಕರ ಫೋನ್ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತದೆ. ಅದರಲ್ಲಿ ಬುಕಿಂಗ್ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಈ ಸಂದೇಶದಲ್ಲಿ  ಗ್ಯಾಸ್ ಸಿಲಿಂಡರ್ ಅನ್ನು ಆನ್‌ಲೈನ್ ಪಾವತಿ ಮಾಡಲು ಲಿಂಕ್ ಇರುತ್ತದೆ. ಈ ಲಿಂಕ್‌ನಲ್ಲಿ ಗ್ರಾಹಕರು ಸಿಲಿಂಡರ್‌ನ ಬೆಲೆಯನ್ನು ಡೆಬಿಟ್, ಕ್ರೆಡಿಟ್,  ಅಥವಾ ಇತರ ಆನ್‌ಲೈನ್ ಪಾವತಿ ಪ್ಲ್ಯಾಟ್‌ಫಾರ್ಮ್‌ಗಳಿಂದ ಪಾವತಿಸಬಹುದು.

ಇದನ್ನೂ ಓದಿ:ಎಲ್ಪಿಜಿ ಸಿಲೆಂಡರ್ ಪಡೆಯಲು ಇನ್ನೂ ಮುಂದೆ ಓಟಿಪಿ ನೀಡಬೇಕು

ದೂರವಾಣಿ ಮೂಲಕವೂ ಬುಕ್‌ ಮಾಡುವ ಸೇವೆ ಇರಲಿದೆ:

ಇಂಡೇನ್ ಗ್ಯಾಸ್ ಕಂಪನಿಯ ಸಿಲಿಂಡರ್ ಅನ್ನು ಏಜೆನ್ಸಿಯಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡುವ ಮೂಲಕವೂ ಗ್ಯಾಸ್‌ ಸಿಲಿಂಡರ್‌ ಬುಕ್ ಮಾಡಬಹುದು. ಇದಕ್ಕಾಗಿ ನೀವು ನಗರದ ಐವಿಆರ್ ಸಂಖ್ಯೆಗೆ ಕರೆ ಮಾಡಿ ಕೆಲವು ವಿವರಗಳನ್ನು ಅನುಸರಿಸಬೇಕು.