News

ರಾಜ್ಯದಲ್ಲಿ 167 ಲಕ್ಷ ಮೆಟ್ರಿಕ್ ಟನ್ ಮೇವು ಲಭ್ಯ- ಪ್ರಭು ಚವ್ಹಾಣ

20 May, 2021 4:55 PM IST By:
fodder

ರಾಜ್ಯದಲ್ಲಿ ಮೇವಿನ ಕೊರತೆ ಎದುರಾಗದಂತೆ ಪಶುಸಂಗೋಪನೆ ಇಲಾಖೆಯ ಎಲ್ಲ ಉಪನಿರ್ದೇಶಕರಿಗೆ ಸೂಚಿಸಲಾಗಿದ್ದು ಯಾವುದೇ ಜಿಲ್ಲೆಯಲ್ಲಿ ಮೇವಿನ ಅಭಾವ ಎದುರಾದರೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರಿಗೆ ಮೇವಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯ ರಾಜ್ಯದಲ್ಲಿ 115 ಲಕ್ಷ ದನ ಮತ್ತು ಎಮ್ಮೆಗಳು, 172 ಲಕ್ಷ ಕುರಿ ಮೇಕೆಗಳಿದ್ದು ಸುಮಾರು 167 ಲಕ್ಷ ಮೆಟ್ರಿಕ್ ಟನ್ ಮೇವು 31 ವಾರಗಳಿಗೆ ಆಗುವಷ್ಟು ಲಭ್ಯವಿದೆ. ದಿನ ಒಂದಕ್ಕೆ ಮೇವು ಅವಲಂಭಿತ ದೊಡ್ಡ ಹಾಗೂ ಸಣ್ಣ ಗಾತ್ರದ ಜಾನುವಾರುಗಳು ಸರಾಸರಿ 0.5 ಕೆ.ಜಿಯಿಂದ 6 ಕೆ.ಜಿ ಆಹಾರ ಬಳಕೆಯ ಸಾಮರ್ಥ್ಯಯಿದ್ದು ಒಂದು ವಾರಕ್ಕೆ ಸುಮಾರು 5.41 ಲಕ್ಷ ಮೆಟ್ರಿಕ್ ಟನ್ ಮೇವು ಬಳಕೆ ಆಗುತ್ತದೆ. ಅಲ್ಲದೇ ರೈತರಿಗೆ ಮತ್ತು ಜಾನುವಾರು ಸಾಕಣೆದಾರರಿಗೆ ರಾಜ್ಯದಲ್ಲೆ ಒಟ್ಟು 1,33,971 ಮೇವಿನ ಬೀಜದ ಮಿನಿ ಕಿಟ್ ಗಳನ್ನು ಸಹ 2020-21ನೇ ಸಾಲಿನಲ್ಲಿ ವಿತರಿಸಲಾಗಿದೆ.

ರಾಜ್ಯದಲ್ಲಿ ಒಣ ಮೇವಿನ ದರ ಪ್ರತಿ ಟನ್ ಗೆ ರೂ. 5000 ರಿಂದ ರೂ. 6000 ಇದೆ. ಹಸಿ ಮೇವು ರೂ.4000. ಪಶು ಆಹಾರ ಸರಾಸರಿ ರೂ.21,000 ಪ್ರತಿ ಟನ್ ಹಾಗೂ ಖನಿಜ ಮಿಶ್ರಣ ರೂ.100 ರಿಂದ ರೂ.120 ಪ್ರತಿ ಕೆ.ಜೆ.ಗೆ ಲಭ್ಯವಿದೆ.

ಜಿಲ್ಲಾವಾರು ಮೇವಿನ ಲಭ್ಯತೆ :

ಬೆಂಗಳೂರು ನಗರ 25, ಬೆಂಗಳೂರು ಗ್ರಾ 21, ರಾಮನಗರ 24, ಕೋಲಾರ 33, ಚಿಕ್ಕಬಳ್ಳಾಪುರ 33, ತುಮಕೂರು 36, ಚಿತ್ರದುರ್ಗ 34, ದಾವಣಗೆರೆ 33, ಶಿವಮೊಗ್ಗ 16, ಮೈಸೂರು 18, ಚಾಮರಾಜನಗರ 23, ಮಂಡ್ಯ 33, ಕೊಡಗು 18, ದಕ್ಷಿಣ ಕನ್ನಡ 30, ಉಡಪಿ 22, ಚಿಕ್ಕಮಗಳೂರು 32, ಹಾಸನ 27, ಬೆಳಗಾವಿ 31, ವಿಜಯಪುರ 29, ಧಾರವಾಡ 43, ಗದಗ 29, ಹಾವೇರಿ 63, ಉತ್ತರಕನ್ನಡ 13, ಬಾಗಲಕೋಟೆ 36, ಕಲಬುರಗಿ 54, ಯಾದಗಿರಿ 27, ಬೀದರ್ 28, ರಾಯಚೂರು 36, ಬಳ್ಳಾರಿ 48 ಹಾಗೂ ಕೊಪ್ಪಳ 17. ಕನಿಷ್ಟ ಪ್ರಮಾಣದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಳೆ ಬಂದಿರುವುದರಿಂದ ಹಸಿ ಮೇವು ಸಹ ಲಭ್ಯವಿದೆ ಎಂದು ತಿಳಿದುಬಂದಿದೆ.

ಯಾವುದೇ ಜಿಲ್ಲೆಯಿಂದ ಮೇವಿನ ಕೊರತೆ ವರದಿಯಾಗಿಲ್ಲ ಆದರೂ ಸಹ ಪಶುಸಂಗೋಪನೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಾನುವಾರು ಸಾಕಣೆದಾರರಿಗೆ ಹಾಗೂ ರೈತರಿಗೆ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.