ಆನ್‌ಲೈನ್ ಮೂಲಕ ಪುಟ್ಟ ಮಕ್ಕಳಿಗೆ ಬೋಧನೆ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ನಡೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ರಾಜ್ಯದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಯಾವುದೇ ಪಠ್ಯಕ್ರಮಗಳಲ್ಲಿ ಕಲಿಯುತ್ತಿರುವ ಎಲ್‌ಕೆಜಿಯಿಂದ 5 ನೇ ತರಗತಿವರೆಗೂ ಮಕ್ಕಳಿಗೆ ಆನ್‌ಲೈನ್ ಮೂಲಕ ತರಗತಿ ನಡೆಸುತ್ತಿದ್ದರೆ ತಕ್ಷಣದಿಂದಲೇ ಅದನ್ನು ಸ್ಥಗಿತಗೊಳಿಸಬೇಕೆಂದು ಪ್ರಾಥಮಿಕ ಹಾಗೂ ಪ್ರೌಢಶಿಣ ಸಚಿವ ಸುರೇಶಕುಮಾರ ಹೇಳಿದರು.
ಲಾಕ್‌ಡೌನ್ ಸಮಯದಲ್ಲಿ ಖಾಸಗಿ ಶಾಲೆಗಳು ಆರಂಭಿಸಿರುವ ಆನ್‌ಲೈನ್ ತರಗತಿಗಳಿಗೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಶಿಕ್ಷಣ ತಜ್ಞರು ಹಾಗೂ ವಿವಿಧ ಕ್ಷೇತ್ರದ ಪರಿಣಿತರೊಂದಿಗೆ ಬುಧವಾರ ಸುದೀರ್ಘ ಚರ್ಚೆ ನಡೆಸಿದ ನಂತರ ಈ ತೀರ್ಮಾನ ತೆಗೆದುಕೊಂಡಿದ್ದರಿಂದ ಪ್ರಾಥಮಿಕ ಹಂತದಲ್ಲಿ ಎಲ್ಲ ಪಠ್ಯಕ್ರಮದ ಶಾಲೆಗಳಲ್ಲಿ ಆನ್‌ಲೈನ್ ಬೋಧನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸೂಚಿಸಲಾಗಿದೆ ಎಂದರು.
ತಜ್ಞರ ಸಮಿತಿ ರಚನೆ: 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಶಿಕ್ಷಣ ಯಾವ ವಿಧಾನದಲ್ಲಿ ನೀಡಬೇಕು ಎಂಬುದನ್ನು ನಿರ್ಧರಿಸಲು ಹಾಗೂ ಅದರ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಮಾರ್ಗಸೂಚಿಗಳನ್ನು ರೂಪಿಸಲು ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಸಚಿವರು ಹೇಳಿದರು.
ಸಮಿತಿಯಲ್ಲಿ ಜ್ಞಾನ ಆಯೋಗದ ಸದಸ್ಯ ಡಾ. ಕೆ. ಎಂ. ಶ್ರೀಧರ್, ಹಿರಿಯ ಶಿಕ್ಷಣ ತಜ್ಞರಾದ ಪ್ರೊ. ಗುರುರಾಜ ಕರಜಗಿ, ಡಾ.ವಿ.ಪಿ. ನಿರಂಜನ ಆರಾಧ್ಯ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಪ್ರತಿನಿಧಿಗಳಾದ ಹೃಷಿಕೇಶ್, ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞ ಡಾ. ಜಾನ್, ಅರ್ಲಿ ಚೈಲ್ಡ್‌ಹುಡ್ ಸಂಘಟನೆಯ ಪ್ರತಿನಿಧಿಗಳು, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ
ಗಳ ಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಇರುತ್ತಾರೆ ಎಂದು ಹೇಳಿದರು.
‘ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಸಿಕೊಳ್ಳಬೇಕು, ತರಗತಿ ಇಲ್ಲದಿರುವಾಗ ಮಕ್ಕಳ ಶಿಕ್ಷಣ ನಿರಂತರತೆಗಾಗಿ ಇದನ್ನು ಎಷ್ಟು ಬಳಕೆ ಮಾಡಬೇಕು ಎಂಬುದನ್ನು ಸಮಿತಿ ನಿರ್ಧರಿಸಲಿದೆ. ರಜಾ ಅವಧಿಯಲ್ಲಿ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಹೇಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಕೋವಿಡ್‌ನಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ತರಗತಿಗಳಿಗೆ ಪರ್ಯಾಯವೆನ್ನುವ ಭಾವನೆಯನ್ನು ಮೂಡಿಸದೇ ಅವರ ಕಲಿಕೆಗೆ ಪ್ರೇರಣೆಯಾಗುವಂತೆ ಮಾತ್ರವೇ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಿದೆ. ಯಾವುದೇ ವಿದ್ಯಾರ್ಥಿ ಕಲಿಕೆಯಿಂದ ವಂಚಿತವಾಗದೇ ಮುಖ್ಯವಾಹಿನಿಯಲ್ಲಿ ಒಳಗೊಳ್ಳುವುದು ಸೇರಿದಂತೆ ಈ ಪರ್ಯಾಯ ಬೋಧನಾ ಕ್ರಮದ ಮಾರ್ಗ
ಸೂಚಿಗಳನ್ನು ರೂಪಿಸಿ ಈ ಸಮಿತಿಯು 10 ದಿನಗಳಲ್ಲಿ ವರದಿ ನೀಡಲಿದೆ ಎಂದು ಮಾಹಿತಿ ನೀಡಿದರು
ಟಿ.ವಿ ಚಾನೆಲ್:
ಗ್ರಾಮೀಣ ಭಾಗ ಮತ್ತು ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಸಾಧ್ಯವೇ ಇಲ್ಲ, ಹೀಗಾಗಿ ಟಿವಿ ಮೂಲಕ ಶಿಕ್ಷಣ ನೀಡಲು ಅನುಕೂಲವಾಗುವಂತೆ ಮೂರು ಶೈಕ್ಷಣಿಕ ಚಾನೆಲ್‌ಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.