ರಾಜ್ಯದಲ್ಲಿ ಇಂದು ರಾತ್ರಿಯಿಂದ ಜಾರಿಯಾಗಲಿರುವ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ರೈತರು ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನ ಸಾಗಿಸಲು ಯಾರು ಅಡ್ಡಿಪಡಿಸುವಂತಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ವಿಕಾಸಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಾರಾಂತ್ಯ ಕರ್ಫ್ಯೂ, ಜನತಾ ಕರ್ಫ್ಯೂ, ರೈತರಿಗೆ ಅನ್ವಯಿಸುವುದಿಲ್ಲ. ರೈತರು ಹೂವು, ಹಣ್ಣು, ದವಸ, ಧಾನ್ಯ ಮಾರುಕಟ್ಟೆಗೆ ಸಾಗಿಸಲು ಯಾವುದೇ ಅಡ್ಡಿಯಿಲ್ಲ. ರೈತರ ವಾಹನವನ್ನು ಪೊಲೀಸರಾಗಲಿ, ಆರ್‌ಟಿಓಗಳಾಗಲಿ ತಡೆದು ತೊಂದರೆ ನೀಡದಂತೆ ಸೂಚನೆ ನೀಡಿದರು.
ರೈತರ ಕೃಷಿ ಚಟುವಟಿಕೆಗಳಿಗೂ ಯಾವುದೇ ಅಡ್ಡಿಯಿಲ್ಲ. ರಸಗೊಬ್ಬರ ಅಂಗಡಿ, ರೈತ ಸಂಪರ್ಕ ಕೇಂದ್ರಗಳು ಎಂದಿನಂತೆ ತೆರೆದಿರುತ್ತವೆ ಎಂದರು.
ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, ರಸಗೊಬ್ಬರ ಅಂಗಡಿಗಳಿಗಾಗಲೀ, ರೈತ ಸಂಪರ್ಕ ಕೇಂದ್ರಗಳಿಗಾಗಲೀ, ಬಿತ್ತನೆ ಕಾರ್ಯಕ್ಕಾಗಲೀ ಯಾರೂ ಸಹ ತೊಂದರೆಯನ್ನುಂಟು ಮಾಡಬಾರದು.ಕೆಲವು ಕಡೆ ಕೃಷಿ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿರುತ್ತದೆ.
ಹೀಗೆ ಮಾಡಿರುವುದು ತಪ್ಪು. ಎಲ್ಲಾ ಇಲಾಖೆಗಳು ಎಲ್ಲಾ ಇಲಾಖಾಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರಬಾರದು. ಕೊರೋನಾ ಸುರಕ್ಷತೆ ಸಾಮಾಜಿಕ ಅಂತರದ ಜೊತೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜನತಾ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ರೈತರ ಪರಿಕರಗಳನ್ನು ವಶಕ್ಕೆ ಪಡೆದಿರುವ ದೂರುಗಳು ಬಂದಿವೆ. ಈ ರೀತಿ ಯಾರೂ ಮಾಡಬಾರದು. ಕೃಷಿ ಅಧಿಕಾರಿಗಳು ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕು ಎಂದ ಅವರು, ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.