News

ಬಿಪಿಎಲ್‌ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ - ಉಮೇಶ್‌ ಕತ್ತಿ ಸ್ಪಷ್ಟನೆ

15 February, 2021 6:36 PM IST By:
BPL Card

ಟಿವಿ, ಬೈಕ್‌, ಫ್ರಿಡ್ಜ್‌ ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂಬ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ  ಬಿಜೆಪಿ ಸರಕಾರ ಬಿಪಿಎಲ್‌ ಕಾರ್ಡ್‌ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ ಅವರು ಸುದ್ದಿಗೋಷ್ಠಿಯಲ್ಲಿ ಟಿವಿ, ಬೈಕ್‌, ಫ್ರಿಡ್ಜ್‌ ಇರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದರಿಂದಾಗಿ ಯು ಟರ್ನ್ ಹೊಡೆದ ಉಮೇಶ ಕತ್ತಿ ಬಿಪಿಎಲ್ ಕಾರ್ಡ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.

 ಸಾರ್ವಜನಿಕರಿಂದ ಹಾಗೂ ಸ್ವಪಕ್ಷದ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಯೂಟರ್ನ್ ಹೊಡೆದಿದ್ದು, ಈ ಹಿಂದೆ ಮಾನದಂಡಗಳೇ ಮುಂದುವರಿಸಲಾಗುವುದು ಎಂದು ಸೋಮವಾರ ಹೇಳಿದ್ದಾರೆ.

 ತಾವು ಸಚಿವನಾದ ನಂತರ ಯಾವುದೇ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಈ ಹಿಂದಿನ ಸರಕಾರಗಳು ಬಿಪಿಎಲ್‌ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಒಳಪಡಿಸಲು ನಾಲ್ಕು ಆದೇಶಗಳನ್ನು ಹೊರಡಿಸಿದ್ದವು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವಾಗಲಿ ಅಥವಾ ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕವಾಗಲೀ ಈ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬಿಪಿಎಲ್ ಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

'ಐದು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು, ಮನೆಯಲ್ಲಿ ಬೈಕ್ ಟಿವಿ, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದರು. ಅಲ್ಲದೆ ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಮತ್ತು ವರ್ಷಕ್ಕೆ 1.20 ಲಕ್ಷ ರೂಗಿಂತ ಅಧಿಕ ವರಮಾನ ಹೊಂದಿರುವವರು ಸಹ ಬಿಪಿಎಲ್ ಕಾರ್ಡ್ ಹೊಂದಿರುವಂತಿಲ್ಲ. ಅವುಗಳನ್ನು ಮಾರ್ಚ್ 31ರ ಒಳಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಸಮೀಕ್ಷೆ ನಡೆಸಿ ಕಾರ್ಡುಗಳನ್ನು ಹಿಂಪಡೆಯುತ್ತದೆ ಎಂದು ಹೇಳಿದ್ದರು.

ಒಂದು ವೇಳೆ ಈ ಎಲ್ಲ ಸೌಲಭ್ಯಗಳು ಇದ್ದರೂ ಬಿಪಿಎಲ್ ಕಾರ್ಡು ಹೊಂದಿದ್ದರೆ ಅಂತಹವರಿಗೆ ದಂಡದ ಜತೆಗೆ ಶಿಕ್ಷೆ ಸಹ ನೀಡಲಾಗುತ್ತದೆ ಎಂದು ಉಮೇಶ್ ಕತ್ತಿ ಎಚ್ಚರಿಕೆ ನೀಡಿದ್ದರು. ಈಗ ಅವರೇ ಯುಟರ್ನ್ ಹೊಡೆದು ಬಿಪಿಎಲ್‌ ಕಾರ್ಡ್‌ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದ್ದಾರೆ.