News

ನಿರೀಕ್ಷೆಯಷ್ಟಾಗಲಿಲ್ಲ ಬೆಳೆ ಸಮೀಕ್ಷೆ

08 September, 2020 9:06 AM IST By:

ಕೃಷಿ ಇಲಾಖೆಯು 2020–21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸಲು ‘ರೈತರ ಬೆಳೆ ಸಮೀಕ್ಷೆ ಆ್ಯಪ್‌’ ಅಭಿವೃದ್ಧಿಪಡಿಸಿ ರೈತರೇ ತಮ್ಮ ಬೆಳೆಗಳ ಸಮೀಕ್ಷೆಗೆ ಸ್ವತಂತ್ರ ನೀಡಲಾಗಿತ್ತು. ಇದಕ್ಕೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಬಂತಾದರೂ ನಂತರ ನೆಟ್ವರ್ಕ್ ಹಾಗೂ ಜಿಪಿಎಸ್ ಸಮಸ್ಯೆಯಿಂದಾಗಿ ಹಲವಾರು ರೈತರು ಈ ಸಮೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಅನ್ನದಾತರಿಂದ ನಿರೀಕ್ಷಿತ ಮಟ್ಟದಲ್ಲಿ ಒಲವು ವ್ಯಕ್ತವಾಗಿಲ್ಲ.

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಕೇವಲ ಶೇ 32.95ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ರಾಜ್ಯದ ಒಟ್ಟಾರೆ 2.12 ಕೋಟಿ ಪ್ಲಾಟ್‌ಗಳಲ್ಲಿ ಇದುವರೆಗೆ 69 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ. ಸೆ.10ರ ಕಡೆಯ ದಿನವಾಗಿದ್ದರಿಂದ ಇನ್ನೂ ರೈತರು ತಮ್ಮ ಬೆಳೆಗಳಿಗೆ ಸಮೀಕ್ಷೆ ಮಾಡಿಸಬಹುದು.

ಬೆಳೆ ಸಮೀಕ್ಷೆ ಕಾರ್ಯಕ್ಕೆ ಆಗಸ್ಟ್ 10 ರಂದು ಚಾಲನೆ ನೀಡಲಾಗಿತ್ತು.  ಆ.24ರೊಳಗೆ ರಾಜ್ಯದ ಎಲ್ಲ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಯ ವಿವರಗಳನ್ನು ದಾಖಲಿ ಸಲು ಕೃಷಿ ಇಲಾಖೆ ಅವಕಾಶ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಮೀಕ್ಷೆ ಕಾರ್ಯ ನಡೆಯದೆ ಇರುವುದರಿಂದ ಸಮೀಕ್ಷೆ ದಿನಾಂಕವಿಸ್ತರಣೆ ಮಾಡಲಾಗಿತ್ತು. ವಿಸ್ತರಣೆ ದಿನಾಂಕದಲ್ಲಿಯೂ ಅಧಿಕೃತವಾಗಿ ಮಾಹಿತಿ ನೀಡದೆ ಇರುವುದರಿಂದ ರೈತರು ಸಮೀಕ್ಷೆ ಕಾರ್ಯದಿಂದ ಹಿಂದುಳಿದರು. ನಿರೀಕ್ಷಿತಮಟ್ಟದಲ್ಲಿ  ಸಮೀಕ್ಷೆ ಕಾರ್ಯ ಪೂರ್ಣಗೊಳ್ಳದ ಕಾರಣ ಮತ್ತೆ ಸೆ.10ರವರೆಗೆ ಅವಧಿ ವಿಸ್ತರಿಸಲಾಗಿತ್ತು. ಅಂಡ್ರಾಯ್ಡ್‌ ಫೋನ್‌ ಸೌಲಭ್ಯವಿಲ್ಲದವರಿಗೆ, ರೈತರ ಪರವಾಗಿ ಖಾಸಗಿ ನಿವಾಸಿಗಳ (ಪಿ.ಆರ್‌) ಮೂಲಕ ಅಪ್‌ಲೋಡ್‌ ಮಾಡಲೂ ಅವಕಾಶ ಕಲ್ಪಿಸಲಾಗಿತ್ತು. ಆದರೂ ಪ್ರಗತಿ ಅಷ್ಟಕಷ್ಟೆಯಾಗಿದೆ.

ಸೆಪ್ಟೆಂಬರ್ 6 ರವರೆಗೆ ಸಮೀಕ್ಷೆಯಲ್ಲಿ ವಿಜಯಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.  ವಿಜಯಪುರ (ಶೇ 58.32), ಬಾಗಲಕೋಟೆ (ಶೇ 56.12), ದಾವಣಗೆರೆ (ಶೇ 54.46) ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿದ ಮೊದಲ ಮೂರು ಸ್ಥಾನದಲ್ಲಿವೆ. ಕೊಡಗು (ಶೇ 11.57), ಉಡುಪಿ (ಶೇ 14.32), ಬೆಂಗಳೂರು ನಗರ (ಶೇ 14.52) ಜಿಲ್ಲೆಗಳು ಕೊನೆಯ ಮೂರು ಸ್ಥಾನದಲ್ಲಿವೆ.