News

ಸದೃಢ ಭಾರತಕ್ಕೆ ನೈಸರ್ಗಿಕ ಕೃಷಿ ಅವಶ್ಯ-ರವಿಶಂಕರ ಗುರೂಜಿ

09 February, 2021 10:25 AM IST By:
Horticulture fair inauguration

ಸದೃಢ ಭಾರತ ನಿರ್ಮಾಣಕ್ಕೆ ನೈಸರ್ಗಿಕ ಕೃಷಿಯೇ ಭವಿಷ್ಯವಾಗಿದ್ದು, ಈ ಪದ್ಧತಿ ಅಳವಡಿಸಿಕೊಳ್ಳುವುದಕ್ಕೆ ಎಲ್ಲರೂ ಸಂಕಲ್ಪ ತೊಡಬೇಕು’ ಎಂದು ಆರ್ಟ್‌ ಆಫ್ ಲಿವಿಂಗ್‌ನ ಮುಖ್ಯಸ್ಥ ಶ್ರೀಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದರು.

ಅವರು ಹೆಸರಘಟ್ವದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ಆವರಣದಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ ಉದ್ಘಾಟಿಸಿ ಮಾತನಾಡಿದರು.

ದೇಶದ ಸಮಸ್ತ ರೈತ ಸಮುದಾಯ, ನವೋದ್ಯಮ ಮತ್ತು ಸದೃಢ ಭಾರತಕ್ಕಕಾಗಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ಸಂಕಲ್ಪ ತೊಡಬೇಕು. ದೇಶವು ಮತ್ತೆ ಹಿಂದಿನ ಕೃಷಿ ಪದ್ಧತಿಗೇ ಮರಳುವ ಅಗತ್ಯವಿದೆ. ನಾವಿಂದು ಸ್ವಾಭಾವಿಕ ಹಾಗೂ ಸೈನರ್ಗಿಕ ಕೃಷಿಯನ್ನು ಮರೆತಿದ್ದೇವೆ. ನಮ್ಮ ಮಣ್ಣುಗಳು ವಿಷಪೂರಿತವಾಗುತ್ತಿವೆ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಕೆಲವರು ಇಂದಿಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಪ್ರದೇಶಗಳಲ್ಲಿ ಹಣ್ಣುಗಳನ್ನು ಬೆಳೆಯುವ ಕೆಲಸವಾಗಬೇಕು. ಆಗ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜೊತೆಗೆ, ಹಣ್ಣುಗಳ ಸೇವನೆಯಿಂದ ಜನರಲ್ಲಿ ಪೌಷ್ಟಿಕಾಂಶವೂ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಮ್ಮಲ್ಲಿ ಕಡಿಮೆ ದರದಲ್ಲಿ ಸಿಗುವ ನುಗ್ಗೆಸೊಪ್ಪಿನಲ್ಲಿ ಸಾಕಷ್ಟು ಪೌಷ್ಟಿಕಾಂಶ ಇದೆ. ಅದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ, ಅದನ್ನು ಸೇವಿಸುವುದು ಕಡಿಮೆ. ಆದರೆ ಅಮೆರಿಕದಲ್ಲಿ ನಮ್ಮ ದೇಶದ ನುಗ್ಗೆಸೊಪ್ಪುನ್ನು ಪುಡಿ ಮಾಡಿ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಮೇರಿಕಾದಂತೆ ನಮ್ಮ ದೇಶದಲ್ಲಿ ಈ ಕಾರ್ಯ ನಮ್ಮಲ್ಲಿ ಆಗಬೇಕಾಗಿದೆ’ ಎಂದರು.

ಐಐಹೆಚ್ಆರ್ ಬಿಡುಗಡೆಗೊಳಿಸಿದ ಅರ್ಕಾ ವ್ಯಾಪಾರ ಆಪ್ ದೇಶದ ರೈತರು ಮತ್ತು ಗ್ರಾಹಕರಿಗೆ ಒಂದು ವರದಾನವಾಗಲಿದೆ. ಇದರಿಂದಾಗಿ ಉತ್ಪಾದನೆಯ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯೂ ಕೂಡ ಅರ್ಥಪೂರ್ಣವಾಗಲಿದೆ ಎಂದು ಹೇಳಿದರು.

ಆಹಾರ ಪದ್ಧತಿಯಿಂದಲೂ ಕೊರೊನಾ ನಿಯಂತ್ರಣ: ‘ಭಾರತೀಯರು  ಔಷಧೀಯ ಗುಣವುಳ್ಳ ಆಹಾರ ಪದಾರ್ಥಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಕೊರೊನಾ ನಮ್ಮ ಹತ್ತಿರಕ್ಕೂ ಸರಿಯುವುದಿಲ್ಲ. ನಮ್ಮ ಸಾವಯವ ಆಹಾರ ಪದ್ಧತಿಯಿಂದಲೇ ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿವೆ’ ಎಂದು ಗುರೂಜಿ ಅಭಿಪ್ರಾಯಪಟ್ಟರು.