News

ಕೃಷಿ ವಲಯಕ್ಕೆ ನಬಾರ್ಡ್‌ನಿಂದ ಬಂಪರ್‌ ಗಿಫ್ಟ್‌: ರೈತರಿಗೆ 1.2ಲಕ್ಷ ಕೋಟಿ ಸಾಲ ವಿತರಣೆ

11 September, 2020 11:23 AM IST By:

ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರವನ್ನು ಬೆಂಬಲಿಸಲು ನಬಾರ್ಡ್ ಬ್ಯಾಂಕ್ (National Bank for Agriculture and Rural Development) ಕೃಷಿ ಕ್ಷೇತ್ರಕ್ಕೆ ಬೃಹತ್ ಸಾಲ ನೀಡಲು ಮುಂದಾಗಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಬೆಳೆಸಾಲವನ್ನು ವಿತರಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ಕೃಷಿ ಉತ್ಪಾದನಾ ವೆಚ್ಚ ಪೂರೈಸಲು ರೈತರಿಗೆ 1.20 ಲಕ್ಷ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸುವ ಗುರಿ ಹೊಂದಿರುವುದಾಗಿ 'ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನ್ಯಾಷನಲ್‌ ಬ್ಯಾಂಕ್‌ ಫಾರ್‌ ಅಗ್ರಿಕಲ್ಚರ್‌ ಆಂಡ್‌ ರೂರಲ್‌ ಡೆವಲಪಮೆಂಟ್- ನಬಾರ್ಡ್‌)  ಘೋಷಿಸಿದೆ.

ಕೃಷಿಕ್ಷೇತ್ರಕ್ಕೆ ಸಾಲ ಒದಗಿಸುವ ದೇಶದ ಅತ್ಯುನ್ನತ ಬ್ಯಾಂಕಾಗಿರುವ ನಬಾರ್ಡ್‌ನಿಂದ ಪ್ರತಿವರ್ಷವೂ ಸರಾಸರಿ 90 ಸಾವಿರ ಕೋಟಿ ರುಪಾಯಿ ಬೆಳೆ ಸಾಲವನ್ನು ವಿನಾಯಿತಿ ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ. ಆದರೆ, ಪ್ರಸ್ತುತ ಹಣಕಾಸು ವರ್ಷದಲ್ಲಿ ಸಾಲದ ಪ್ರಮಾಣವನ್ನು 1.20 ಲಕ್ಷ ಕೋಟಿ ರೂಪಾಯಿಗೆ ವಿಸ್ತರಿಸಲಾಗಿದೆ  ಎಂದು ನಬಾರ್ಡ್ ಅಧ್ಯಕ್ಷ ಜಿ.ಆರ್. ಚಿಂತಲ  ಹೇಳಿದ್ದಾರೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಕೃಷಿ ವಲಯದ ಕಾರ್ಯ ಚಟುವಟಿಕೆಯಲ್ಲಿ ಮಹತ್ತರ ಬದಲಾವಣೆಗಳಾಗಿವೆ. ನಗರ ಪ್ರದೇಶಗಳಿಂದ ಹಲವಾರು ಜನ ಗ್ರಾಮಾಂತರ ಪ್ರದೇಶಗಳಿಗೆ ಮರಳಿದ್ದರಿಂದ ಕೃಷಿ ಚಟುವಟಿಕೆಯಲ್ಲಿ ಚುರುಕುಕಂಡಿದೆ. ಇನ್ನೂಕೃಷಿ ವಲಯವನ್ನು ಪ್ರೋತ್ಸಾಹಿಸಲು ನಿರ್ಧರಿಸಲಾಗಿದೆ. ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅಡಿ 1ಲಕ್ಷ ಕೋಟಿ ರುಪಾಯಿಯ ಕೃಷಿ ಮೂಲಸೌಕರ್ಯ ನಿಧಿ ಮೂಲಕ ಕೃಷಿ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಯೋಜನೆಯಡಿ ಪ್ರಸ್ತುತ ವರ್ಷ 10 ಸಾವಿರ ಕೋಟಿ ರೂಪಾಯಿ ಹಾಗೂ ಮುಂದಿನ ಮೂರು ವರ್ಷಕ್ಕೆ 30 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ನಬಾರ್ಡ್ ತಿಳಿಸಿದೆ.