ಕೊರೋನಾದಿಂದ ಭಾರತವಷ್ಟೇ ಅಲ್ಲ ಇಡೀ ಪ್ರಪಂಚವೇ ಚಿಂತಾಕ್ರಾಂತದಲ್ಲಿದೆ. ಯಾರೂ ಕೂಡ ಮನೆಯಿಂದ ಹೊರ ಬಾರದ ಪರಿಸ್ಥಿತಿಯಲ್ಲಿದ್ದಾರೆ, ಪಾರ್ಕುಗಳು, ಈಜುಕೋಳ, ಸ್ಟೇಡಿಯಂ ಸೇರಿದಂತೆ ಹಲವಾರು ವಿಜೃಂಭಣೆಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದ್ದರಿಂದ ಸ್ಟಾರ್ ವ್ಯಕ್ತಿಗಳಿಗೆ ಕಟ್ಟಿ ಹಾಕಿದಂತಾಗಿದೆ. ಸ್ಟಾರ್ಗಳ ಪರಿಸ್ಥಿತಿಯಂತೂ ಕೇಳುವ ಹಾಗಿಲ್ಲ. ಕೆಲವರು ಅಡಿಗೆ, ಸಿನಿಮಾ, ಜಿಮ್ಮು ಅಂತಾ ಬ್ಯುಸಿಯಾಗಿದ್ದರೆ, ಕ್ರೀಡಾಪಟುಗಳು ಸಿಕ್ಕ ಟೈಂನಲ್ಲಿ ಫ್ಯಾಮಿಲಿ ಜೊತೆ ನೆಮ್ಮದಿಯಾಗಿ ಕಾಲ ಕಳೆಯುತ್ತಿದ್ದಾರೆ. ಆದರೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ.
ಧೋನಿ ಜಾಹೀರಾತುಗಳಲ್ಲಿ ನಟಿಸುವ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಸ್ಥಗಿತಗೊಳಿಸಿದ್ದಾರೆ. ಕೊರೋನಾ ಸಂಕಷ್ಟ ದೂರವಾಗಿ ಜನಜೀವನವು ಸಹಜಸ್ಥಿತಿಗೆ ಬರುವವರೆಗೂ ಯಾವುದೇ ವಾಣಿಜ್ಯ ವ್ಯವಹಾರಗಳ ಒಪ್ಪಂದ ಮಾಡದಿರಲು ನಿರ್ಧರಿಸಿದ್ದಾರೆ ಎಂದು ಧೋನಿಯವರ ಮ್ಯಾನೇಜರ್, ಬಾಲ್ಯದ ಗೆಳೆಯ ಮಿಹಿರ್ ದಿವಾಕರ್ ತಿಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ, ಸಾವಯವ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ.ಶೀಘ್ರದಲ್ಲಿ ತಮ್ಮದೇ ಬ್ರಾಂಡಿನ ಪರಿಸರ ಸ್ನೇಹಿ ರಸಗೊಬ್ಬರವನ್ನು ಪರಿಚಯಿಸಲಿದ್ದಾರೆ ಎಂದ ಅವರು ಇದೇ ಮಂಗಳವಾರ ತನ್ನ 39ನೇ ಜನ್ಮದಿನ ಆಚರಿಸಿಕೊಂಡ ಮಹೇಂದ್ರಸಿಂಗ್ ಧೋನಿ ಈಗ ಸಾವಯವ ಕೃಷಿಯಲ್ಲಿ ತೊಡಗಿದಲ್ಲದೆ ಎಂದಿನಂತೆ ಜೀವನ ಮರಳುವವರೆಗೂ ಯಾವುದೇ ಜಾಹಿರಾತು ರಾಯಬಾರಿಯಾಗಲ್ಲ ಎಂದು ತಿಳಿಸಿದ್ದಾರೆ.
ದೇಶಭಕ್ತಿ ಧೋನಿಯ ರಕ್ತದಲ್ಲಿಯೇ ಇದೆ. ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಅವರು ಗೌರವ ಹುದ್ದೆಗೆ ಗೌರವ ನೀಡಿದ್ದರು. ಧೋನಿಯವರಿಗೆ ಕೃಷಿಯ ಮೇಲೆ ಮೊದಲಿನಿಂದಲೂ ಆಸಕ್ತಿಯಿತ್ತು. ಈಗ ತಮ್ಮದೇ ಆದ 40-45 ಎಕರೆ ಭೂಮಿಯಲ್ಲಿ ಸಾವಯವ ತೋಟ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ. ಪಪ್ಪಾಯ , ಬಾಳೆ ಹಣ್ಣಿನಂತಹ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದಿವಾಕರ್ ಹೇಳಿದ್ದಾರೆ.
ನಿಯೋ ಗ್ಲೋಬಲ್ ಹೆಸರಿನ ಕಂಪನಿ ಅಡಿ ಸದ್ಯದಲ್ಲಿಯೇ ಸಾವಯವ ರಸಗೊಬ್ಬರವನ್ನು ಪರಿಚಯಿಸಲಿದ್ದಾರೆ.ಧೋನಿಯ ಜಮೀನಿನಲ್ಲಿ ಗೊಬ್ಬರವನ್ನು ಪರೀಕ್ಷಿಸಲಾಗುತ್ತಿದೆ ಎಂದು ಅವರು ಇತ್ತೀಚಿಗೆ ಧೋನಿ ವಿಡಿಯೋವೊಂದರಲ್ಲಿ ಸಾವಯವ ಕೃಷಿ ಉತ್ತೇಜಿಸುವ ಮಾತುಗಳನ್ನಾಡಿದ್ದರು. ತಜ್ಞರು ಹಾಗೂ ವಿಜ್ಞಾನಿಗಳ ತಂಡವೊಂದು ರಸಗೊಬ್ಬರನ್ನು ಅಭಿವೃದ್ಧಿಪಡಿಸಿದೆ. ಎರಡು ಮೂರು ತಿಂಗಳಲ್ಲಿ ಆ ರಸಗೊಬ್ಬರನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.