News

ಕೊರೊನಾಗೆ ಒಂದು ಸಾವಿರಕ್ಕೂ ಹೆಚ್ಚು ಜನ ಬಲಿ, 10 ಸಾವಿರದತ್ತ ಸಾಗುತ್ತಿದೆ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು

29 April, 2020 8:12 PM IST By:

ಭಾರತದ ಬಹುತೇಕ ಪ್ರದೇಶಗಳಲ್ಲಿ ಕೊರೋನಾ ಮಹಾಮಾರಿ ತನ್ನ ರೌದ್ರವತಾರವನ್ನು ಕಡಿಮೆ ಮಾಡುತ್ತಾ ಬಂದಿದ್ದರೂ ಸಹ ಇನ್ನೂ ಹೊಸ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಲ್ಲಲ್ಲಿ ಆತಂಕಕಾರಿ ಘಟನೆಗಳನ್ನು ಸೃಷ್ಟಿಸುತ್ತಲೇ ಇದೆ.

ಒಂದು ತಿಂಗಳ ನಂತರ ದೇಶದಲ್ಲಿ  ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಒಂದು ಸಾವಿರದ ಗಡಿದಾಟಿದೆ. ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದುವರೆಗೂ 1,008 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಮಂಗಳವಾರ ಒಂದೇ ದಿನ 998 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 73 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ 31 ಸಾವಿರ ಗಡಿ ದಾಟಿದ್ದು, ಇದುವರೆಗೂ 31,324 ಮಂದಿಗೆ ಸೋಂಕು ಹರಡಿದೆ ಎಂದು ಸಚಿವಾಲಯ ಹೇಳಿದೆ. ಈ ನಡುವೆ ದೆಹಲಿಯ ಸಿಆರ್‍ಪಿಎಫ್ ಬೆಟಾಲಿಯನ್ ಪಡೆಯ 46 ಯೋಧರಿಗೆ ಸೋಂಕು ಹಚ್ಚಿಸಿರುವ ಕೊರೋನಾ ಓರ್ವ ಯೋಧನನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಯೋಧರನ್ನು ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ. ದೆಹಲಿಯಲ್ಲಿ ಸಿಆರ್‍ಪಿಎಫ್ ಯೋಧರೊಬ್ಬರು ಸಾವನ್ನಪ್ಪುವ ಮೂಲಕ ಇಡೀ ದೇಶದಲ್ಲಿ ಮೊದಲ ಬಾರಿಗೆ ಸೈನಿಕರೊಬ್ಬರು ಬಲಿಯಾದಂತಾಗಿದೆ.
ಮಹಾರಾಷ್ಟ್ರದಲ್ಲಿ ಸೋಂಕು ಏರುಮುಖ

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದತ್ತ ದಾಪುಗಾಲು ಇಡುತ್ತಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆಯೂ ಏರುಮುಖವಾಗುತ್ತಿರುವುದು ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಈ ರಾಜ್ಯದಲ್ಲಿ ಇದುವರೆಗೂ 9,318 ಪ್ರಕರಣಗಳು ಪತ್ತೆಯಾಗಿದ್ದು, ಮೃತಪಟ್ಟವರ ಸಂಖ್ಯೆ 400 ತಲುಪಿದೆ.
ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಗುಜರಾತ್ ಮುಂದುವರೆದಿದ್ದು, ಇದುವರೆಗೂ 3,744 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 181 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲೂ ಕೊರೊನಾ ಅಬ್ಬರ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ಮೂರು ಸಾವಿರ ದಾಟಿದೆ. ಪುಟ್ಟ ರಾಜ್ಯವಾದ ದೆಹಲಿಯಲ್ಲಿ 3,314 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 54 ಮಂದಿ ಅಸುನೀಗಿದ್ದಾರೆ.

ಇದಾದ ನಂತರದ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು, ಈ ರಾಜ್ಯದಲ್ಲಿ 2,387 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 120ಕ್ಕೇರಿದೆ.
ಕರ್ನಾಟಕ ರಾಜ್ಯದಲ್ಲಿ ಬುಧವಾರ ಬೆಳಗ್ಗೆ ಒಂಬತ್ತು ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 532ಕ್ಕೆ ಏರಿಕೆಯಾಗಿದೆ.
 ಬುಧವಾರ ಕಲಬುರಗಿಯಲ್ಲಿ ಹೊಸ ಎಂಟು ಪ್ರಕರಣಗಳು ಕಂಡು ಬಂದಿದೆ. ಮತ್ತೊಂದು ಪ್ರಕರಣ ಬೆಳಗಾವಿಯ ಹುಕ್ಕೇರಿಯಲ್ಲಿ ದೃಢವಾಗಿದೆ. ಬುಧವಾರ ಸೋಂಕಿತರಲ್ಲಿ ಹೆಚ್ಚಿನವರು ಮಕ್ಕಳೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಸಮಾಧಾನಕರ ವಿಷಯವೆಂದರೆ, ಗೋವಾ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ತ್ರಿಪುರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ.