News

ಮುಂಗಾರು -2020 ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯ

23 September, 2020 9:56 PM IST By:

ಪ್ರಸಕ್ತ ಮುಂಗಾರು ಋತು ಸೆ.30 ಅಂತ್ಯಗೊಳ್ಳಲಿದ್ದು, ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿರೀಕ್ಷೆಯಂತೆ ರಾಜ್ಯಕ್ಕೆ ಸರಿಯಾದ ಸಮಯಕ್ಕೆ ಮುಂಗಾರು ಪ್ರವೇಶ ಮಾಡಿತು. ರಾಜ್ಯಾದ್ಯಂತ ಈ ಬಾರಿ ವಾಡಿಕೆಕ್ಕಿಂತ ಹೆಚ್ಚು ಮಳೆಯಾಗಿದೆ.

ಲಾಕ್‌ಡೌನ್‌ನಿಂದಾಗಿ ಕೈಗಾರಿಕೆ ಕ್ಷೇತ್ರ ಸೇರಿದಂತೆ ನಾನಾ ವಲಯಗಳು ಸೊರಗಿದ್ದರೂ, ಕೃಷಿ ಬಿತ್ತನೆ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಆರಂಭದಿಂದಲೂ ನಿಯಮಿತವಾಗಿ ಮಳೆ ಬಿದ್ದ ಕಾರಣ ಬಿತ್ತನೆಗೆ ಪೂರಕ ವಾತಾವರಣ ಮೂಡಿದ್ದರಿಂದ ಬಿತ್ತಣಿಕೆ ಗಣನೀಯವಾಗಿ ಹೆಚ್ಚಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. 1,095.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ಜೂನ್ ಜುಲೈ ತಿಂಗಳಲ್ಲಿ ನಿಧಾನವಾಗಿ ಆರಂಭವಾದ ಮುಂಗಾರು ಆಗಸ್ಟ್ ತಿಂಗಳ ಮತ್ತು ಸೆಪ್ಟೆಂಬರ್ 20ರವರೆಗೆ ತನ್ನ ಆರ್ಭಟ ಮುಂದುವರೆಸಿತ್ತು. ಪ್ರವಾಹದ ಆತಂಕ ಎದುರಾಗಿತ್ತು. ಈಗ ಎಲ್ಲಾ ಕಡೆ ಮಳೆಯ ಪ್ರಭಾವ ಕಡಿಮೆಯಾಗಿದೆ.

ಮಾರುತಗಳು ಈಗಾಗಲೇ ಉತ್ತರ ಹಾಗೂ ಮಧ್ಯ ಭಾರತದತ್ತ ಚಲಿಸುತ್ತಿದ್ದು, ಆ ಭಾಗದಲ್ಲಿ ಮಳೆಯಾಗುತ್ತಿದೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಕಳೆದ ವಾರದಿಂದ ರಾಜ್ಯದಲ್ಲಿ ಸುರಿಯುತ್ತಿದ್ದ ಮಳೆ ಇಳಿಮುಖವಾಗಿದೆ. ಕಲ್ಯಾಣ ಕರ್ನಾಟಕದಲ್ಲಿಯೂ ದಾಖಲೆಯ ಮಳೆಯಾಗಿ ಪ್ರವಾಹದ ಆತಂಕ ಎದುರಾಗಿತ್ತು. ಈಗ  ಮಳೆ ವಿರಾಮ ನೀಡಿದೆ. ಕೃಷಿ ಚಟುವಟಿಕೆಗಳು ಮತ್ತೆ ಭರದಿಂದ ಸಾಗಿದೆ.

ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸುತ್ತಮುತ್ತ ಮೋಡ ಕವಿದ ವಾತಾವರಣ ಇರಲಿದ್ದು, ಅಗಾಗ್ಗೆ ಚದುರಿದಂತೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.