News

ಮುಂಗಾರು ಹಂಗಾಮಿನ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್, ಶೇ.15.23 ರಷ್ಟು ಬಿತ್ತನೆಯಾಗಿದೆ- ಕೃಷಿ ಸಚಿವ ಬಿ.ಸಿ. ಪಾಟೀಲ್

15 June, 2021 4:52 PM IST By:

2020-21ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್​​ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗಿದೆ. ದೇಶದ ಸರಾಸರಿಗೆ ಹೋಲಿಸಿದರೆ ಶೇ. 2ರಷ್ಟು ಹಾಗೂ ರಾಜ್ಯದ ಸರಾಸರಿಗೆ ಹೋಲಿಸಿದರೆ ಶೇ.10ರಷ್ಟು ಹೆಚ್ಚಿನ‌ ಉತ್ಪಾದನೆ ಆಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಗುರಿ 77 ಲಕ್ಷ ಹೆಕ್ಟೇರ್ ಇದೆ. ಶೇಕಡಾವಾರು ಬಿತ್ತನೆ ಶೇ.15.23ರಷ್ಟಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.

ಅವರು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ (ಎನ್.ಎಫ್.ಎಸ್.ಎಂ) ಯೋಜನೆಯಡಿಯಲ್ಲಿ ರೈತರಿರೆಗ ಉಚಿತವಾಗಿ 12.60 ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜಗಳ ಮಿನಿ ಕಿಟ್ ಗಳನ್ನು ನೀಡಲಾಗುತ್ತಿದೆ. ಎನ್ಎಫ್ಎಸ್ಎಂ ಯೋಜನಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಲ್ಲಿ, 4 ಕೆಜಿ ಹೆಸರು 4 ನಾಲ್ಕು ಜಿಲ್ಲೆಗಳಲ್ಲಿ, 20 ಕೆಜಿಯಂತೆ ಸೋಯಾ 8 ಜಿಲ್ಲೆಗಳಲ್ಲಿ ಹಾಗೂ 8 ಕೆಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆ ಮಿನಿಕಿಟ್ ಗಳ್ನು ವಿತರಿಸಲಾಗುತ್ತಿದೆ. ರೈತರಿಗೆ ಈ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದಕ್ಕಾಗಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಬಿತ್ತನೆ ಗುರಿ: ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದೆ ಎಂದರು.

ರಸಗೊಬ್ಬರ ವಿವರ: ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:

2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

ಗೊಬ್ಬರದಲ್ಲಿ 1000 ಸಬ್ಸಿಡಿ ಕೊಡುತ್ತಿದ್ದೇವೆ. ರಸಗೊಬ್ಬರ ಕೊರತೆ ಇಲ್ಲ, ಕೊರತೆ ಇದ್ದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧ. ಆಧಾರ್ ಲಿಂಕ್ ಮಾಡುವುದರಲ್ಲಿ ಕರ್ನಾಟಕ ನಂಬರ್ ಒನ್ ಇದೆ ಎಂದು ಹೇಳಿದರು. ನ್ಯಾನೋ ಯೂರಿಯಾ ಬಂದಿದೆ. ಅರ್ಧ ಲೀಟರ್​ಗೆ 250 ರೂ. ಬೀಳಲಿದೆ. ಇದು ಒಂದು ಚೀಲ ಯೂರಿಯಾ ಗೊಬ್ಬರಕ್ಕೆ ಸಮ ಎಂದು ತಿಳಿಸಿದರು.