News

ರಾಜ್ಯದಲ್ಲಿ ಬಿರುಸುಗೊಂಡ ಮುಂಗಾರು- ಎಲ್ಲೆಡೆ ಅಬ್ಬರಿಸುತ್ತಿರುವ ಮಳೆ

12 June, 2020 3:33 PM IST By:

ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಳೆದ ಮೂರು ಮಳೆ ಅಬ್ಬರಿಸುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳು ಸಹ ಆರಂಭವಾಗಿವೆ.

ಉಡುಪಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರವೂ ಮುಂಗಾರು ಮಳೆ ಮುಂದುವರಿದಿದೆ. ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಬಿಡುವು ಕೊಟ್ಟಿದ್ದ ಮಳೆ, ಸಂಜೆ ಬಳಿಕ ಜೋರಾಗಿ ಸುರಿಯಲು ಆರಂಭಿಸಿದ್ದು, ಮುಂಗಾರು ಬಿರುಸು ಪಡೆದಿದೆ. ಮಡಿಕೇರಿ, ಗಾಳಿಬೀಡು, ತಲಕಾವೇರಿ, ಭಾಗಮಂಡಲ, ನಾಪೋಕ್ಲು, ಕಕ್ಕಬ್ಬೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಮಂಗಳೂರು ನಗರದಲ್ಲಿ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಂಗಳೂರು ತಾಲ್ಲೂಕಿನಲ್ಲಿ 6.3 ಸೆಂ.ಮೀ., ಬೆಳ್ತಂಗಡಿ ತಾಲ್ಲೂಕಿನಲ್ಲಿ 5.8 ಸೆಂ.ಮೀ. ಸೇರಿದಂತೆ ಸರಾಸರಿ 4.6 ಸೆಂ.ಮೀ. ಮಳೆಯಾಗಿದೆ.

ಹಾಸನ ಮೈಸೂರು, ಚಿತ್ರದುರ್ಗ, ದಾವಣಗೆರೆ ನಗರ ಸೇರಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಉಚ್ಚಂಗಿದುರ್ಗ ಗ್ರಾಮದ ಸುತ್ತಮುತ್ತ ಬುಧವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದು ಅವಾಂತರ ಸೃಷ್ಟಿಸಿತು. ದುರ್ಗ-ಮಡಕಿ ನಿಚ್ಚಾಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು.

ಹರಪನಹಳ್ಳಿ ತಾಲ್ಲೂಕಿನ ಬೆಸ್ಕಾಂ ತೆಲಿಗಿ ಉಪವಿಭಾಗದಲ್ಲಿ 2 ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮತ್ತು 15 ವಿದ್ಯುತ್ ಕಂಬಗಳು ಧರೆಗುರುಳಿದ್ದು,  3 ಲಕ್ಷ ಹಾನಿಯಾಗಿದ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಪಟ್ಟಣದ ಪಕ್ಕದಲ್ಲಿ ಹರಿಯುತ್ತಿರುವ ಡೋಣಿ ನದಿ ಮೈದುಂಬಿಕೊಂಡು ಹರಿಯಿತ್ತಿದೆ. ಇದರಿಂದಾಗಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತಾಳಿಕೋಟೆ– ಹಡಗಿನಾಳ ರಸ್ತೆಯಲ್ಲಿನ ನೆಲಮಟ್ಟದ ಸೇತುವೆ ಬೆಳಗಿನಿಂದ ಸಂಜೆಯವರೆಗೆ ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು.
ಕಲಬುರಗಿ ಜಿಲ್ಲೆಯ ಅಫಜಲ್ಪುರ, ಸೇಡಂ, ಬೀದರ್‌ ಜಿಲ್ಲೆಯ ವಿವಿಧೆಡೆ ಹಾಗೂ ಯಾದಗಿರಿ ಜಿಲ್ಲೆಯ ಶಹಾಪುರ, ಹುಣಸಗಿ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಸುರಿಯಿತು.