News

ಮುಂಗಾರು ಮಳೆ ಜೂನ್ 3ಕ್ಕೆ ಕೇರಳ ಪ್ರವೇಶ, ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ

31 May, 2021 9:39 AM IST By:
rain alert

ಈ ವರ್ಷ ಮುಂಗಾರು ಮಳೆಯು ಮೂರು ದಿನ ವಿಳಂಬವಾಗಲಿದೆ, ಜೂನ್ 3 ರಂದು ಕೇರಳ ಪ್ರವೇಶಿಸುವ  ಮುನ್ಸೂಚನೆ ಸಿಕ್ಕಿದೆ. ಯಾಸ್ ಮತ್ತು ತೌಕ್ತೆ ಚಂಡಮಾರುತದ ಪ್ರಭಾವದಿಂದ ಮೇ 31ರಂದು ಕರಾವಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹವಾಮಾನ ಇಲಖೆ ತಿಳಿಸಿತ್ತು. ಒಂದೇ ವಾರದಲ್ಲಿ ಸಂಭವಿಸಿದ್ದ ಎರಡು ಚಂಡಮಾರುತಗಳು ತೇವಾಂಶಭರಿತ ಮೋಡಗಳನ್ನು ಸೆಳೆದುಕೊಂಡಿರುವ ಹಿನ್ನೆಲೆಯಲ್ಲಿ ಮಾರುತುಗಳು ಆಗಮಿಸಲು ಕೊಂಚ ವಿಳಂಬವಾಗಲಿದೆ.

ಕೇರಳದಲ್ಲಿ ಮುಂಗಾರು ಜೂನ್ 3ರಂದು ಪ್ರಬಲವಾಗಿ ರೂಪುಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಕರಾವಳಿ ಕರ್ನಾಟಕದಲ್ಲಿ ಜೂನ್ 1-3ರವರೆಗೆ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಜೂನ್ 2 ಮತ್ತು 3ರಂದು ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶೀಘ್ರದಲ್ಲಿ ಬಂಗಾಳಕೊಲ್ಲಿಯಲ್ಲಿ ಮಂಗಾರು ಮಾರುತಗಳ ಉಂಟಾಗಲು ಉತ್ತಮ ಹವಾಗುಣ ಸೃಷ್ಟಿಯಾಗಲಿದ್ದು, ಜೂನ್ 3 ಅಥವಾ 4 ರಂದು ಕೇರಳಕ್ಕೆ ಪ್ರವೇಶಿಸಲಿದೆ. ಅನಂತರ ಮಾರುತಗಳು ಪ್ರಬಲವಾದರೆ ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಲಿವೆ. ಮೊದಲ 10 ದಿನಗಳಲ್ಲಿ ಮಾರುತಗಳು ದುರ್ಬಲವಾಗಲಿದ್ದು, ಜೂನ್ 15 ರ ನಂತರ ಮಾರುತಗಳು ಚುರುಕಾಗಲಿವೆ. ಇದರಿಂದ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮಾರುತಗಳು ತೀವ್ರಗೊಳ್ಳುತ್ತಿರುವ ಪರಿಣಾಮ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆ ಆಗುವ ಸಂಭವವಿದೆ. ಈ ಬಾರಿ ವಾಡಿಕೆಯಷ್ಟು ಮಳೆಯಾಗಲಿದೆ. ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ. ಬೇಸಿಗೆಯ ಬೆಳೆಗಳಿಗೆ ಈ ಮಾನ್ಸೂನ್ ಮಳೆಯೇ ನಿರ್ಣಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆ, ಕೃಷಿ, ಉದ್ಯೋಗ, ಕೈಗಾರಿಕೆಗಳು ಹೀಗೆ ಪ್ರತಿಯೊಂದು ರಂಗದ ಮೇಲೂ ಈ ಮಾನ್ಸೂನ್ ಮಳೆಯು ಪರಿಣಾಮ ಬೀರಲಿದೆ.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜೂನ್ 2 ರಿಂದ ಮುಂದಿನ ಮೂರು ದಿನ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ಜೂನ್ 3 ಮತ್ತು 4 ರಂದು ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕಳೆದ ಎರಡು ವಾರದಿಂದ ತೌಕ್ತೇ ಹಾಗೂ ಯಾಸ್ ಚಂಡಮಾರುತದ ಪರಿಣಾಮವಾಗಿ ರಾಜ್ಯದಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದೆ. ಹಾಗಾಗಿ ಮುಂಗಾರು ಮಳೆಯ ಅನುಭವವಾಗುತ್ತಿದೆ. ಆದರೆ ರಭಸದ ಮಳೆ ಇನ್ನೂಆಗಿಲ್ಲ. ಕೆಲವು ಕಡೆ ಚದುರಿದ ಮಳೆ ಇನ್ನೂ ಕೆಲವು ಕಡೆ ಗುಡುಗು ಮಿಂಚಿನೊಂದಿಗೆ ಆರ್ಭಟದ ಮಳೆಯೂ ಆಗಿದೆ. ಹಾಗಾಗಿ ರಾಜ್ಯದಲ್ಲಿ ಕೆಲವು ಕಡೆ ತಂಪಾದ ಗಾಳಿ ಬೀಸುತ್ತಿದೆ.