ದೇಶದ ಕೃಷಿ ಚಟುವಟಿಕೆಗಳ ಜೀವನಾಡಿ ಎಂದೇ ಕರೆಯಲ್ಪಡುವ ಮುಂಗಾರು ಮಾರುತಗಳು ಗುರುವಾರ ಕೇರಳಕ್ಕೆ ಪ್ರವೇಶ ಮಾಡಿವೆ. ಮುಂಗಾರು ಮಳೆಗಳು ಇನ್ನೆರಡು ದನಗಳಲ್ಲಿ ತಮಿಳುನಾಡು, ಪುದುಚೇರಿ, ಕರ್ನಾಟಕ, ಆಂದ್ರಪ್ರದೇಶವನ್ನು ಪ್ರವೇಶಿಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿರುವುದರಿಂದ ರಾಜ್ಯದಲ್ಲಿ ಇಂದಿನಿಂದ ಭಾರೀ ಮಳೆಯಾಗಲಿದ್ದು ಇನ್ನೂ 2 ದಿನಗಳ ಕಾಲ ಮಳೆ ಮುಂದುವರೆಯಲಿದೆ. ರಾಜ್ಯದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುವುದರಿಂದ ಒಟ್ಟು 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು ಜೂ 6 ರವರೆಗೆ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಯೆಲ್ಲೋ ಅಲರ್ಟ್:
ಉತ್ತರ ಕನ್ನಡ , ದಕ್ಷಿಣ ಕನ್ನಡ , ಉಡುಪಿ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಕೊಡಗು, ಕೋಲಾರ, ತುಮಕೂರು, ಹಾಸನ, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಧಾರವಾಡ, ಬೆಳಗಾವಿ,ಗದಗ,ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಕರ್ನಾಟಕ ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿಯಲ್ಲಿ ಮಳೆ ಅಬ್ಬರ
ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ಗುಡುಗು-ಮಿಂಚು ಸಹಿತ ಮಳೆ ರಾತ್ರಿ ವೇಳೆ ವ್ಯಾಪಕವಾಗಿ ಸುರಿಯಿತು. ಮುಂದಿನ ಎರಡು ದಿನ ಕೂಡ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದಲ್ಲಿ ವಾಡಿಕೆ ಮಳೆಯ ಶೇ.70ರಷ್ಟು ಜೂನ್-ಸೆಪ್ಟೆಂಬರ್ ನಡುವಿನ ಮುಂಗಾರು ಋುತುವಿನಲ್ಲಿ ಸುರಿಯುತ್ತದೆ. ಈ ವರ್ಷ ವಾಡಿಕೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.